ಮೂರು ದಿನಗಳ ಹಿಂದೆ ನೇಣಿಗೆ ಶರಣಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್ ಹಾಕಿದ ಖಾಸಗಿ ವಾಹಿನಿಯನ್ನು ಜಾಲತಾಣಗಳಲ್ಲಿ ಅನೇಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಂದ್ರಶೇಖರ ಸಿದ್ದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಖಾಸಗಿ ವಾಹಿನಿ, ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದಕ್ಕೆ ‘ಸಿದ್ದಿ ಅವರ ಸಾವಿಗೆ ನೀವೇ ನೇರ ಹೊಣೆ’ ಎಂದು ವಾಹಿನಿಯನ್ನು ದೂರಿದ್ದಾರೆ.
ಗ್ರಾಮೀಣ ಭಾಗದಲ್ಲಿ ತಮ್ಮ ಪಾಡಿಗೆ ನೆಮ್ಮದಿಯಾಗಿ ಬದುಕುತ್ತಿದ್ದ ಮುಗ್ಧ ಜನರನ್ನು, ಬಣ್ಣದ ಲೋಕದ ಆಸೆ ತೋರಿಸಿ ಹಾಳು ಮಾಡುತ್ತಿದ್ದೀರಿ. ಟಿ.ಆರ್.ಪಿ ಆಸೆಗೆ ಅವರನ್ನು ಕರೆತಂದು, ಒಂದು ಶೋ ಮುಗಿದ ನಂತರ ಅವರನ್ನು ಕಡೆಗಣಿಸುತ್ತೀರಿ.
ಕೊನೆಗೆ ಬದುಕಿನ ದಾರಿ ಕಾಣದೇ ಅವರು ಸಾವಿನ ದಾರಿ ಹಿಡಿಯುತ್ತಾರೆ. ಇಂತಹ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಗ್ರಾಮೀಣ ಭಾಗದ ಪ್ರತಿಭೆಗಳ ಬದುಕು ದುರಂತ ಅಂತ್ಯ ಕಂಡಿದೆ. ಇದಕ್ಕೆ ನಿಮ್ಮಂತಹ ವಾಹಿನಿಗಳ ಟಿ.ಆರ್.ಪಿ ದಾಹವೇ ಕಾರಣ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ.
ತಮ್ಮದೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸಿದ್ದಿ ಅವರ ಆತ್ಮಕ್ಕೆ ಶಾಂತಿ ಕೋರಲು ಹೋದ ಖಾಸಗಿ ವಾಹಿನಿ, ಕೋಲು ಕೊಟ್ಟು ಪೆಟ್ಟು ತಿಂದಂತಾಗಿದೆ.