ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದಲ್ಲಿ ನಡೆಸಿದ ಪಕ್ಷಿ ವೈವಿಧ್ಯತೆಯ ಅಧ್ಯಯನದಲ್ಲಿ 25 ವಿಭಿನ್ನ ಪಕ್ಷಿ ಪ್ರಜಾತಿಗಳನ್ನು ಗುರುತಿಸಲಾಗಿದೆ.
ಪಶ್ಚಿಮ ಘಟ್ಟದ ಜೀವವೈವಿಧ್ಯತೆಯ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 355.7 ಮೀಟರ್ ಎತ್ತರದಲ್ಲಿರುವ ಈ 3900 ಹೆಕ್ಟೇರ್ ವಿಸ್ತೀರ್ಣದ ಗ್ರಾಮದಲ್ಲಿ ಕಳೆದ ಜೂನ್-ಜುಲೈ 2024 ಅವಧಿಯಲ್ಲಿ ನಡೆಸಿದ ಈ ಅಧ್ಯಯನ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಗೆ ಪ್ರಮುಖ ಮೈಲಿಗಲ್ಲಾಗಿದೆ.
ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ಕೆ. ನಾಗರಾಜ ಹೆಗಡೆ ಚಿಕ್ಕೊರಗಿ, ಅವರು ಈ ಅಧ್ಯಯನ ನಡೆಸಿದ್ದಾರೆ.
ಅಧ್ಯಯನದ ಸಮಯದಲ್ಲಿ ಪಕ್ಷಿಗಳ ಅತಿ ಹೆಚ್ಚಿನ ಚಟುವಟಿಕೆಯ ಸಮಯವಾದ ಬೆಳಗಿನ ಜಾವ 6 ರಿಂದ 9 ಗಂಟೆಯ ಅವಧಿ ಮತ್ತು ಸಂಜೆ 4 ರಿಂದ 6 ಗಂಟೆಗಳಲ್ಲಿ ಪೊಲಾರ್ಡ್ ವಾಕ್ ಮೆಥಡ್ (PWM) ಬಳಸಿ ಪಕ್ಷಿಗಳಿಗೆ ಯಾವುದೇ ತೊಂದರೆ ಇಲ್ಲದೆ ನೇರ ವೀಕ್ಷಣೆ ಮತ್ತು ಉನ್ನತ ರೆಸಲ್ಯೂಶನ್ ಛಾಯಾಚಿತ್ರದ ಮೂಲಕ ಸಂಶೋಧನೆ ನಡೆಸಲಾಗಿದೆ. ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕ ಪ್ರಸನ್ನ ಭಟ್ಟ ಡಬ್ಗುಳಿ ಅವರು ಸುಂದರ ಛಾಯಾಚಿತ್ರಗಳನ್ನು ನೀಡುವ ಮೂಲಕ ಈ ಸಂಶೋಧನೆಗೆ ಸಹಕರಿಸಿದ್ದಾರೆ.
ಸಾಮಾನ್ಯ ಮೈನಾ, ಕೆಂಪು ಮೂಗು ಬುಲ್ಬುಲ್, ಕೆಂಪು ಹೊಟ್ಟೆ ಬುಲ್ಬುಲ್, ಏಷ್ಯನ್ ಹಸಿರು ಜೇನುತಿನ್ನಿ ಮುಂತಾದ ಸಾಮಾನ್ಯ ಪಕ್ಷಿಗಳ ಜೊತೆಗೆ ಮಲಬಾರ್ ಟ್ರೋಗನ್, ಮಲಬಾರ್ ಫ್ಲೇಮ್‌ಬ್ಯಾಕ್, ಓರಿಯೆಂಟಲ್ ಪೈಡ್ ಹಾರ್ನ್‌ಬಿಲ್, ಇಂಡಿಯನ್ ಪಿಟ್ಟಾ, ಭಾರತೀಯ ಮಯೂರ, ಪರ್ಪಲ್ ರಂಪ್ಡ್ ಸನ್‌ಬರ್ಡ್, ಲೇಯಾರ್ಡ್ ಗಿಣಿ ಮುಂತಾದ ವಿಶೇಷ ಮತ್ತು ಸ್ಥಳೀಯ ಪ್ರಜಾತಿಗಳನ್ನು ಗುರುತಿಸಲಾಗಿದೆ.
ಈ ಅಧ್ಯಯನದ ಪ್ರಕಾರ ಪಕ್ಷಿಗಳು ಬೀಜ ಪ್ರಸರಣ, ಪರಾಗಸ್ಪರ್ಶ ಮತ್ತು ಕೀಟ ನಿಯಂತ್ರಣದ ಮೂಲಕ ಪಾರಿಸರಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪರಿಸರ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ಸ್ಥಳೀಯ ಪಕ್ಷಿಗಳು ಕಾಡಿನ ಪ್ರದೇಶಗಳಲ್ಲಿ ಕಂಡುಬಂದಿದ್ದು, ಇದು ಪ್ರಕೃತಿಯ ಸಂರಕ್ಷಣೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
ಕೃಷಿ ವಿಸ್ತರಣೆ ಮತ್ತು ಅರಣ್ಯ ನಾಶದಿಂದ ಪಕ್ಷಿ ಪ್ರಜಾತಿಗಳಿಗೆ ಬೆದರಿಕೆ ಎದುರಾಗುತ್ತಿರುವುದರಿಂದ ಅವುಗಳ ಆವಾಸಸ್ಥಾನ ಸಂರಕ್ಷಣೆ, ಮರು ಅರಣ್ಯೀಕರಣ ಮತ್ತು ದೀರ್ಘಕಾಲೀನ ಮಾನಿಟರಿಂಗ್ ಕಾರ್ಯಕ್ರಮಗಳ ಅಗತ್ಯವಿದೆ ಎಂಬ ಅಂಶ ನಾಗರಾಜ ಅವರ ಸಂಶೋಧನಾ ಪ್ರಬಂಧದಲ್ಲಿ ಮಹತ್ವದ ವಿಷಯವಾಗಿ ಹೇಳಿದ್ದಾರೆ.
ಪಶ್ಚಿಮ ಘಟ್ಟದ ಅನ್ವೇಷಿಸಲಾಗದ ಪ್ರದೇಶದಲ್ಲಿ ಮೊದಲ ಬಾರಿಗೆ ನಡೆಸಲಾದ ಈ ಸಮಗ್ರ ಪಕ್ಷಿ ದಾಖಲೀಕರಣ ಅಧ್ಯಯನವು ಪರಿಸರ ಸಂರಕ್ಷಣೆಗೆ ಮಹತ್ವದ ಮೂಲಭೂತ ಮಾಹಿತಿಯನ್ನು ಒದಗಿಸಿದೆ. ಭವಿಷ್ಯದ ಸಂಶೋಧನೆಗಳಿಗೆ ಅಡಿಪಾಯ ಹಾಕಿದೆ.
ಈ ಸಂಶೋಧನಾ ಲೇಖನವನ್ನು ಪೂರ್ಣಪ್ರಜ್ಞ ಇಂಟರ್ನ್ಯಾಶನಲ್ ಜರ್ನಲ್ ಆಫ್ ಬೇಸಿಕ್ & ಅಪ್ಲೈಡ್ ಸೈನ್ಸಸ್ ಜರ್ನಲ್‌ನಲ್ಲಿ ಕೂಡ ಪ್ರಕಟಿಸಿರುವುದು ವಿಶೇಷ.