ಯಲ್ಲಾಪುರದ ಮುಂಡಗೋಡ ರಸ್ತೆಯ ಪಕ್ಕ ಬಿ.ಎಸ್.ಎನ್.ಎಲ್ ವಸತಿಗೃಹ ಸಂಕೀರ್ಣದ ಎದುರು ವರ್ಷಗಳಿಂದ ಬಿದ್ದಿರುವ ಕಸದ ರಾಶಿಗೆ ಅಂತೂ ಮುಕ್ತಿ ಸಿಕ್ಕಿದೆ.
ರಾಶಿ, ರಾಶಿ ಕಸ ಬಿದ್ದಿದ್ದು, ಕಸದ ರಾಶಿಯ ನಡುವೆಯೇ ಕಸದ ತೊಟ್ಟಿಯೊಂದು ಬಿದ್ದುಕೊಂಡಿತ್ತು. ನೋಡುವವರಿಗೆ ಅದೂ ಕಸವೇ ಇರಬಹುದೆಂಬ ಭಾವನೆ ಮೂಡಿಸುವಂತಿತ್ತು. ಮಳೆಯ ನೀರೂ ಕಸದೊಂದಿಗೆ ಸೇರಿ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿತ್ತು. ಹಿರಿಯ ನಾಗರಿಕರ ವಿಶ್ರಾಂತಿಗಾಗಿ ಬೆಂಚ್ ಒಂದು ಅಲ್ಲಿದ್ದರೂ, ಕಸದ ಕಾರಣಕ್ಕಾಗಿ ಯಾರೂ ಅಲ್ಲಿ ಕುಳಿತುಕೊಳ್ಳುವಂತಿರಲಿಲ್ಲ.
ಈ ಸಮಸ್ಯೆ ಬಗ್ಗೆ ನಿನ್ನೆ ಸಂಜೆ ‘ಶ್ರೀ ನ್ಯೂಸ್’ ವರದಿ ಪ್ರಕಟಿಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ ಹಾಗೂ ಸ್ಥಳೀಯ ಸದಸ್ಯ ಸೋಮೇಶ್ವರ ನಾಯ್ಕ, ಕಸ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಸ್ಥಳಕ್ಕೆ ಬಂದ ಸಿಬ್ಬಂದಿ ಕಸ ತೆಗೆದು ಸ್ವಚ್ಛಗೊಳಿಸಿದ್ದಾರೆ. ಕಸ ವಿಲೇವಾರಿ ವಾಹನದ ಮೂಲಕ ಎಲ್ಲ ಕಸವನ್ನು ವಿಲೇವಾರಿ ಮಾಡಲಾಗಿದೆ. ಕಸದ ರಾಶಿಯ ನಡುವೆ ಬಿದ್ದಿದ್ದ ಕಸದ ತೊಟ್ಟಿಯನ್ನೂ ಹೊತ್ತೊಯ್ದಿದ್ದಾರೆ.
ವರ್ಷಗಳಿಂದಾಗದ ಕಾರ್ಯ, ‘ಶ್ರೀ ನ್ಯೂಸ್’ ನ ಒಂದು ವರದಿಯಿಂದ ಆದ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.