ಮೀನು ಹಿಡಿಯಲು ಹೋಗಿ ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿದ್ದ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ. ದಿನವಿಡೀ ಹುಡುಕಿದರೂ ಇನ್ನೊಬ್ಬನ ಸುಳಿವು ಸಿಕ್ಕಿಲ್ಲ.
ಮಹಮ್ಮದ್ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27) ಶವವಾಗಿ ಪತ್ತೆಯಾಗಿದ್ದಾರೆ. ಮಾದನಸರದ ಎಂಟು ಜನ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ಮರಳಿ ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೇ ನೀರು ಹೆಚ್ಚಾಗಿ ರಫೀಕ್ ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದರು.
ಭಾನುವಾರ ರಾತ್ರಿವರೆಗೆ ಶೋಧ ಕಾರ್ಯ ನಡೆಸಿದ್ದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸೋಮವಾರ ಇಡೀ ದಿನ ಶೋಧ ನಡೆಸಿದರು. ಘಟನೆ ನಡೆದ 300 ಮೀಟರ್ ದೂರದಲ್ಲಿ ಮಧ್ಯಾಹ್ನದ ವೇಳೆಗೆ ರಫೀಕ್ ಶವವಾಗಿ ಸಿಕ್ಕಿದ್ದಾರೆ. ಶವವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮಹಮ್ಮದ್ ಹನೀಫ್ ಗಾಗಿ ಸಂಜೆಯವರೆಗೂ ಶೋಧ ನಡೆಸಿದ್ದು, ಸಂಜೆ ಶೋಧ ಕಾರ್ಯ ನಿಲ್ಲಿಸಲಾಗಿದೆ. ಮಂಗಳವಾರ ಬೆಳಗ್ಗೆ ಮತ್ತೆ ಶೋಧ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.ವೈ.ಎಸ್.ಪಿ ಗೀತಾ ಪಾಟೀಲ, ಸಿಪಿಐ ರಮೇಶ ಹಾನಾಪುರ, ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಸಿದ್ದಪ್ಪ ಗುಡಿ, ಅಗ್ನಿಶಾಮಕದ ದಳದ ಅಧಿಕಾರಿಗಳು ಶೋಧ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.