ಹಿಂದುಳಿದ ಸಮಾಜಕ್ಕೆ ಅನ್ಯಾಯವಾದರೆ ಖಂಡಿಸುವ ಮೂಲಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹೊಸದಾಗಿ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಹುಟ್ಟುಹಾಕಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್ ಹೇಳಿದರು.
ಅವರು ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರ್ಮಿಕ,ರಾಜಕೀಯ,ಕೋಮು ವಿಷಯ ಹೊರತಾದ ಸಂಘಟನೆ ಇದಾಗಿದೆ. ಸ್ವಾರ್ಥ ರಹಿತ, ಸಮಾಜಮುಖಿ ಚಟುವಟಿಕೆ ಹಮ್ಮಿಕೊಂಡು ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಎಲ್ಲ ವರ್ಗದವರ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘಟನೆಯ ಧ್ಯೇಯ ಎಂದರು.
ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಕೇಬಲ್ ನಾಗೇಶ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸಿ ರಾಜ್ಯ ಮಟ್ಟದವರೆಗೆ ಸಂಘಟನೆ ವಿಸ್ತರಿಸಲಾಗುತ್ತದೆ. ಮುಂದಿನ ಎರಡು ತಿಂಗಳೊಳಗೆ ತಾಲೂಕಾ ಸಂಘಟನೆ ಪದಾಧಿಕಾರಿಗಳನ್ನು ರಚಿಸಿಕೊಂಡು ಸಂಘದ ಕಾರ್ಯಚಟುವಟಿಕೆ ಪ್ರಾರಂಭಿಸಲಾಗುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ, ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ಇದ್ದವರನ್ನು ಸಂಘಟನೆಗೆ ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಚ್ ದೇಶಳ್ಳಿ ಮಾತನಾಡಿ, ಗ್ರಾಮೀಣ ಮಟ್ಟದಿಂದ ಇಡೀ ರಾಜ್ಯವ್ಯಾಪಿ ಎಲ್ಲ ಸಮುದಾಯದವರನ್ನು ಸೇರಿಕೊಂಡು ಸಂಘಟನೆ ರೂಪಿಸಲಾಗುತ್ತದೆ ಎಂದರು.
ಮಹಿಳಾ ಘಟಕದ ಪ್ರಮುಖರಾದ ರೋಹಿಣಿ ದೀಕ್ಷಿತ್ ಕೊಪ್ಪಳ, ರಾಜ್ಯ ಉಪಾಧ್ಯಕ್ಷ ನಾಗರಾಜ ಯಾಮಕೆ, ಪ್ರಮುಖರಾದ ಸುನಿತಾ ಶೆಟ್ಟಮ್ಮನವರ್, ಉಮೇಶ ಶಿರಾಲಿ, ಎಂ.ಡಿ ಗೌಸ್, ಅಬ್ದುಲ್ ಕರೀಂ ಖಾನ್, ಎಡ್ವಿನ್ ಫರ್ನಾಂಡಿಸ್ ಇದ್ದರು.