ಯಲ್ಲಾಪುರ ತಾಲೂಕಿನ ತೇಲಂಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದೊಯ್ದು ಭತ್ತದ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.
ಏಳನೇ ತರಗತಿಯ ‘ಸೀನ ಸೆಟ್ಟರು ನಮ್ಮ ಟೀಚರ್ರು’ ಪಾಠದ ಬೋಧನೆಯ ಅಂಗವಾಗಿ ಈ ಚಟುವಟಿಕೆ ನಡೆಸಲಾಯಿತು. ಶಿಕ್ಷಕಿ ನಿರ್ಮಲಾ ಭಾಗ್ವತ ಅವರ ಮಾರ್ಗದರ್ಶನದಲ್ಲಿ ತೇಲಂಗಾರಿನ ಎಂ.ಆರ್.ಭಟ್ಟ ಅವರ ಗದ್ದೆಗೆ ಹೋದ ಮಕ್ಕಳು, ಮಹೇಶ ಗೌಡ ಅವರೊಂದಿಗೆ ನಾಟಿ ಕಾರ್ಯದಲ್ಲಿ ತೊಡಗಿಕೊಂಡು, ಕೃಷಿಯ ಅನುಭವ ಪಡೆದರು.
ಭತ್ತ ಬೆಳೆಯುವ ವಿಧಾನ, ಅದರ ಹಿಂದಿನ ಸಮಸ್ಯೆ, ಸವಾಲುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.