ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಹಾಕ್ರಾಂತಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಕೆ.ಎನ್.ರಾಜಣ್ಣ ಸಂಪುಟದಿಂದ ವಜಾ ಆಗಿದ್ದಾರೆ. ಅವರದೇ ವಿಕೆಟ್ ಬೀಳುವ ಮೂಲಕ ಒಂದು ತಿಂಗಳು ಮೊದಲೇ ಕ್ರಾಂತಿ ಆರಂಭವಾಗಿದೆ ಎಂದು ಬಿಜೆಪಿ ಮುಖಂಡ, ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
ಸೆಪ್ಟೆಂಬರ್ ಗೆ ಇನ್ನೂ ಒಂದು ತಿಂಗಳು ಇರುವಾಗಲೇ ಸ್ವತಃ ಕೆ.ಎನ್.ರಾಜಣ್ಣ ವಿಕೆಟ್ ಉರುಳುವ ಮೂಲಕ ಸರಕಾರದಲ್ಲಿ ‘ಕ್ರಾಂತಿ’ ಆರಂಭವಾಗಿಬಿಟ್ಟಿದೆ. ಇನ್ನೊಂದು ತಿಂಗಳಲ್ಲಿ ಏನಾಗಲಿದೆಯೋ ಆ ಶಿವಕುಮಾರನೇ ಬಲ್ಲ. ಆದರೆ ಈ ಕ್ರಾಂತಿಯ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ನಾಗೇಂದ್ರ, ಇಂದು ರಾಜಣ್ಣ, ನಾಳೆ ಸತೀಶ ?. ಇದೆಲ್ಲ ನೋಡಿದರೆ, ಈ ಕ್ರಾಂತಿ ತಮ್ಮದೇ ಸರಕಾರದ ವಿರುದ್ದ ಒಂದು ಸಮುದಾಯದ ಅತೃಪ್ತರ ಕ್ರಾಂತಿಯೇ? ಅಥವಾ ಒಂದು ಸಮುದಾಯದ ಅತೃಪ್ತರನ್ನೇ ಟಾರ್ಗೆಟ್ ಮಾಡಿ, ಅವರನ್ನೇ ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಸಿ, ಅವರನ್ನೇ ಸರಕಾರದಿಂದ ಹೊರದಬ್ಬುವ ಪ್ರಯತ್ನ ಇನ್ಯಾರಿಂದಲೋ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ ಎಂದಿದ್ದಾರೆ.