ಗ್ಯಾರಂಟಿ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ, ತಮ್ಮ ಪ್ರಚಾರದ ಸಲುವಾಗಿ ನಮ್ಮ ಸಮಿತಿಯ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು.
ಅವರು ಯಲ್ಲಾಪುರದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಲ್ತರಗದ್ದೆ ಆತ್ಮಹತ್ಯೆ ವಿಚಾರದಲ್ಲಿ ಸತ್ಯವನ್ನು ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಹಿಳೆ ಹಸಿವಿನಿಂದ ಸತ್ತಿದ್ದಾರೆ, ಅವರಿಗೆ ಸರ್ಕಾರದ ಯಾವ ಸೌಲಭ್ಯವೂ ಇರಲಿಲ್ಲ, ಸರ್ಕಾರಿ ದಾಖಲೆಗಳೂ ಇರಲಿಲ್ಲ ಎಂಬ ವಿಚಾರ ಸುಳ್ಳು. ಸರಿಯಾದ ಮಾಹಿತಿ ಪಡೆದುಕೊಳ್ಳದೇ ಸುಳ್ಳನ್ನೇ ಪ್ರಚಾರ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಯಾವುದೇ ವಿಷಯಗಳ ಕುರಿತು ಮಾತನಾಡುವ ಮುನ್ನ ಸರಿಯಾಗಿ ಮಾಹಿತಿ ಪಡೆದೇ ಮಾತನಾಡಿದರೆ ಘನತೆ ಉಳಿಯುತ್ತದೆ ಎಂದರು.
ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್.ಗಾಂವ್ಕರ, ತಾ.ಪಂ ಇಒ ರಾಜೇಶ ಧನವಾಡಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್ಟ, ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಮಾತನಾಡಿದರು.
ಗ್ಯಾರಂಟಿ ಸಮಿತಿಯ ಸದಸ್ಯರಾದ ಮುಷರತ್ ಖಾನ್, ಬಸ್ತ್ಯಾಂವ ಸಿದ್ದಿ, ಫಕೀರಪ್ಪ, ಮಹೇಶ ನಾಯ್ಕ ಇತರರಿದ್ದರು.