ಮಾಜಿ ಶಾಸಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಉಮೇಶ ಭಟ್ಟ ಭಾವಿಕೇರಿ ಅವರ 6 ನೇ ಪುಣ್ಯಸ್ಮರಣೆ ಉಮೇಶ ಭಟ್ಟ ಅಭಿಮಾನಿ ಬಳಗದಿಂದ ಯಲ್ಲಾಪುರದ ನಾಯಕನಕೆರೆ ಶ್ರೀ ರಾಘವೇಂದ್ರ ಹಿರಿಯ ನಾಗರಿಕರ ಗೃಹದಲ್ಲಿ ನಡೆಯಿತು.
ಉಮೇಶ ಭಟ್ಟ ಅವರ ನೆನಪಿನಲ್ಲಿ ವೃದ್ಧಾಶ್ರಮಕ್ಕೆ ಡಿಲಕ್ಸ್ ಕುರ್ಚಿಗಳನ್ನು ನೀಡಲಾಯಿತು. ಭಟ್ಟರ. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಉಮೇಶ ಭಟ್ಟ ಅವರು ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅಪಾರ ಸಾಧನೆ ಮಾಡಿದವರು. ದೂರದೃಷ್ಟಿಯಿಂದ ಸಮಾಜದ ಒಳಿತಿಗಾಗಿ ಸದಾ ದುಡಿದವರು ಎಂದು ಸ್ಮರಿಸಿದರು.
ಸಾಮಾಜಿಕ ಕಾರ್ಯಕರ್ತ ಡಿ.ಎನ್.ಹೆಗಡೆ ಮಾತನಾಡಿ, ಉಮೇಶ ಭಟ್ಟ ಅವರ ಹೆಸರಿನಲ್ಲಿ ಸಂಸ್ಥೆಯೊಂದನ್ನು ಪ್ರಾರಂಭಿಸಿ, ಅವರ ಹೆಸರು, ಕೆಲಸಗಳು ಚಿರಸ್ಥಾಯಿಯಾಗಿ ಇರುವಂತೆ ಮಾಡುವ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಉಮೇಶ ಭಟ್ಟ ಅಭಿಮಾನಿ ಬಳಗದ ಪ್ರಮುಖ ವೇಣುಗೋಪಾಲ ಮದ್ಗುಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಟ್ಟರು ಶಾಸಕರಾಗಿ ವಿಧಾಯಕ ಕೆಲಸಗಳನ್ನು ಮಾಡಿದ್ದಷ್ಟೇ ಅಲ್ಲ. ಅನೇಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅವರ ಸ್ಮರಣಾರ್ಥ ಕಳೆದ ವರ್ಷ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ಖುರ್ಚಿ ನೀಡಿದ್ದೆವು. ಈ ಬಾರಿಯೂ ಅಂತಹ ಕಾರ್ಯಕ್ರಮದ ಮೂಲಕವೇ ಅವರನ್ನು ಸ್ಮರಿಸಲಾಗುತ್ತಿದೆ. ಅವರಿಂದ ಪ್ರಯೋಜನ ಪಡೆದವರು, ಅವರನ್ನು ಸ್ಮರಿಸಲೇಬೇಕಾದವರು ಸ್ಮರಿಸದೇ ಇರುವುದು ಸರಿಯಲ್ಲ ಎಂದರು.
ಉಮೇಶ ಭಟ್ಟ ಅವರ ನಿಕಟವರ್ತಿ ಬಾಲಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪ.ಪಂ ಮಾಜಿ ಸದಸ್ಯ ಪ್ರಹ್ಲಾದ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಎನ್.ಡಿ.ಹೆಬ್ಬಾರ, ರಾಘವೇಂದ್ರ ಹಿರಿಯ ನಾಗರಿಕರ ಗೃಹದ ಮುಖ್ಯಸ್ಥ ಚಂದ್ರಪ್ಪ ಅಣ್ಣೇರ ಉಪಸ್ಥಿತರಿದ್ದರು. ಕೆ.ಆರ್.ನಟರಾಜ ಪ್ರಾರ್ಥಿಸಿದರು. ಶ್ರೀಧರ ಅಣಲಗಾರ ನಿರ್ವಹಿಸಿ, ವಂದಿಸಿದರು.