ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದ ಯುವಕನಿಗಾಗಿ ಮಂಗಳವಾರವೂ ಶೋಧ ಕಾರ್ಯಾಚರಣೆ ನಡೆದಿದ್ದು, ಯುವಕ ಪತ್ತೆಯಾಗಿಲ್ಲ.
ಮಹಮ್ಮದ್ ಹನೀಫ್ ಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ಸಂಜೆಯವರೆಗೂ ಶೋಧ ನಡೆಸಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲೂ ಆತ ಪತ್ತೆಯಾಗಿಲ್ಲ.
ಮಾದನಸರದ ಎಂಟು ಜನ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ಮರಳಿ ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೇ ನೀರು ಹೆಚ್ಚಾಗಿ ರಫೀಕ್ ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದರು.
ಸೋಮವಾರ ಮಹಮ್ಮದ್ ರಫೀಕ್ ಶವವಾಗಿ ಸಿಕ್ಕಿದ್ದು, ಮಹಮ್ಮದ್ ಹನೀಫ್ ಗಾಗಿ ಮಂಗಳವಾರವೂ ಕಾರ್ಯಾಚರಣೆ ಮುಂದುವರಿದಿತ್ತು. ಆಗಾಗ ಸುರಿಯುವ ಮಳೆ, ರಾಡಿ ನೀರು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ.
ಬುಧವಾರ ಮತ್ತೆ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ.