ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಯೋಜನೆ ಹಾಗೂ ಇ ಪೌತಿ ಆಂದೋಲನ ಯಲ್ಲಾಪುರ ತಾಲೂಕಿನಲ್ಲಿ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಹಸೀಲ್ದಾರ ಚಂದ್ರಶೇಖರ ಹೊಸಮನಿ ಹೇಳಿದರು.
ಅವರು ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇ-ಪೌತಿ ಆಂದೋಲನ ಮತ್ತು ಭೂ ಸುರಕ್ಷಾ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಹಳೆಯ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ತಾಲೂಕಿನಲ್ಲಿ 1836 ರ ನಂತರದ 21 ಲಕ್ಷ ಹಳೆಯ ದಾಖಲೆಗಳಿದ್ದು, ಅದರಲ್ಲಿ 12 ಲಕ್ಷ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಬಾಕಿ ಇರುವ 9 ಲಕ್ಷ ದಾಖಲೆಗಳನ್ನು ಎರಡು ತಿಂಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದೆಂದರು.
ತಾಲೂಕಿನಲ್ಲಿ 2257 ಆರ್.ಟಿ.ಸಿಗಳು ಸತ್ತವರ ಹೆಸರಿನಲ್ಲಿವೆ. ಅದರಲ್ಲಿ ಅವರ ಹೆಸರನ್ನು ಕಡಿಮೆ ಮಾಡಿ, ಅವರ ವಾರಸುದಾರರ ಹೆಸರು ಸೇರಿಸಲಾಗುವುದು. ವಂಶಾವಳಿ, ಪಹಣಿ ಪತ್ರಿಕೆ ಹಾಗೂ ಅವರ ದಾಖಲೆಗಳನ್ನು ನೀಡಿದರೆ ಕೂಡಲೇ ಪ್ರಕ್ರಿಯೆ ನಡೆಸಲಾಗುವುದು.
ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ. ಜನರಿಂದ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ.
ಕಂದಾಯ ದಾಖಲೆ, ಆರ್.ಟಿ.ಸಿಗಳನ್ನು ಅಪ್ ಡೇಟ್ ಮಾಡಿಕೊಳ್ಳದೇ ಇದ್ದಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಕಾರಣ ಈ ಆಂದೋಲನದಲ್ಲಿ ಎಲ್ಲರೂ ಭಾಗವಹಿಸಬೇಕೆಂದರು. ಗ್ರೇಡ್ 2 ತಹಸೀಲ್ದಾರ ಸಿ.ಜಿ.ನಾಯ್ಕ ಇದ್ದರು.