ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಾದಾವಧಾನ ಪ್ರತಿಷ್ಠಾನ ಕುಂದಾಪುರ ವತಿಯಿಂದ ಮೂರು ದಿನಗಳ ಯಕ್ಷಗಾನ ಕಾರ್ಯಾಗಾರವನ್ನು ಸೆ.5,6,7 ರಂದು ಯಲ್ಲಾಪುರ ತಾಲೂಕಿನ ಚಂದಗುಳಿಯ ಯುಕೆ ನೇಚರ್ ಸ್ಟೇಯಲ್ಲಿ ಆಯೋಜಿಸಲಾಗಿದೆ.
ಸೆ.5 ರಂದು ಬೆಳಗ್ಗೆ 11 ಕ್ಕೆ ಯುಕೆ ನೇಚರ್ ಸ್ಟೇ ಮಾಲಿಕ ನಿರಂಜನ ಭಟ್ಟ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ, ಯಕ್ಷಗುರು ಎ.ಪಿ.ಪಾಠಕ ಪುಣೆ, ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗ್ವತ ಕಡತೋಕಾ, ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ ಅತಿಥಿಗಳಾಗಿ ಭಾಗವಹಿಸುವರು.
ಸೆ.5 ರಂದು ‘ತಾಳಾಂತರಂಗ’ ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಯನ್ನು ಎ.ಪಿ.ಪಾಠಕ ಪುಣೆ, ಎನ್.ಜಿ.ಹೆಗಡೆ ಯಲ್ಲಾಪುರ, ಗಣೇಶ ಗಾಂವ್ಕರ ಕನಕನಹಳ್ಳಿ ನಡೆಸಿಕೊಡಲಿದ್ದಾರೆ. ನಂತರ ‘ಸ್ವರ ಸಂಗತಿ’ ವಿಚಾರಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ಎ.ಪಿ.ಪಾಠಕ ಹಾಗೂ ಅನಂತ ಹೆಗಡೆ ದಂತಳಿಗೆ ಅವರಿಂದ ನಡೆಯಲಿದೆ.
ಸೆ.6 ರಂದು ‘ನವರಸಾಲಾಪ’ ಸಾತ್ವಿಕ ಅಭಿನಯ ಸಂಕಿರಣ, ನವರಸಗಳ ಅಭಿನಯ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ, ‘ಮುದ್ರಾಲಾಪ-ಆಂಗಿಕ ಅಭಿನಯ ಸಂಕಿರಣ’ ಮುದ್ರೆಗಳು, ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಅಶ್ವಿನಿ ಕೊಂಡದಕುಳಿ, ಸದಾಶಿವ ಭಟ್ಟ ಮಲವಳ್ಳಿ, ನಾಗರಾಜ ಭಟ್ಟ ಕುಂಕಿಪಾಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಸೆ.7 ರಂದು ‘ಕಥಾ ಕಾಲಕ್ಷೇಪ-ಯಕ್ಷಗಾನ ಸಾಹಿತ್ಯ ಸಂಪದ’ ತಾಳಮದ್ದಲೆ ಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಎನ್. ಹೆಗಡೆ ಹಳವಳ್ಳಿ, ಡಾ.ಡಿ.ಕೆ.ಗಾಂವ್ಕರ, ಶಿವರಾಮ ಭಟ್ಟ ಭಾಗವಹಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು ನಾದಾವಧಾನ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪ್ರಸಿದ್ಧ ಮದ್ದಲೆವಾದಕ ಎನ್.ಜಿ.ಹೆಗಡೆ ಯಲ್ಲಾಪುರ – 9448700024 ಅವರನ್ನು ಸಂಪರ್ಕಿಸಬಹುದಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಸಂಘಟಕ ಎನ್.ಜಿ.ಹೆಗಡೆ ವಿನಂತಿಸಿದ್ದಾರೆ.
ಏನಿದು ನಾದಾವಧಾನ:
ನಾದಾವಧಾನ ಪ್ರತಿಷ್ಠಾನ ಯಕ್ಷಗಾನದ ಬಡಗುತಿಟ್ಟಿನ ಭಾಗವತಿಕೆ, ಮದ್ದಳೆ, ಚಂಡೆ ಹಾಗೂ ನೃತ್ಯ ತರಬೇತಿಯನ್ನು ಆನ್ಲೈನ್ ಮೂಲಕ ನಡೆಸುತ್ತಿದೆ. ಯಕ್ಷಗುರು ಎ.ಪಿ.ಪಾಠಕ ಹಾಗೂ ಮದ್ದಲೆವಾದಕ ಎನ್.ಜಿ.ಹೆಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಭಿನ್ನ ಪ್ರಯತ್ನಕ್ಕೆ ಕಲಾಸಕ್ತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಈಗಾಗಲೇ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲಿ ಕಲಿತು, ರಂಗವೇರಿದ್ದಾರೆ. ಸಂಸ್ಥೆಯಿಂದಲೇ ರಂಗ ಪ್ರವೇಶಕ್ಕೂ ವೇದಿಕೆ ಕಲ್ಪಿಸಲಾಗುತ್ತದೆ. ಸಂಸ್ಥೆಯ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರಸ್ತುತಿ ಕಲಾ ವಲಯದಲ್ಲಿ ಮೆಚ್ಚುಗೆ ಗಳಿಸಿವೆ. ತರಗತಿ, ಕಾರ್ಯಕ್ರಮಗಳ ಜತೆಗೆ ಕಲಾಸಕ್ತರಿಗೆ, ಕಲಾವಿದರಿಗೆ ನೆರವಾಗುವಂತಹ ಕಾರ್ಯಾಗಾರ, ಕಮ್ಮಟಗಳನ್ನೂ ಹಮ್ಮಿಕೊಳ್ಳುವ ಮೂಲಕ ಮಾದರಿ ಸಂಘಟನೆಯಾಗಿ ಹೊರಹೊಮ್ಮುತ್ತಿದೆ.







