ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಕೋಳಿಕೇರಿಯ ದೇಶಪಾಂಡೆನಗರ ಕ್ರಾಸ್ ಬಳಿ ನಡೆದಿದೆ.
ರಾಯಚೂರು ಜಿಲ್ಲೆಯ ಉಡಂಗಲ್ ನ ನರಸಿಂಹ ನರಸಪ್ಪ ಬುಗಲಿ (24) ಮೃತ ಸವಾರ. ಬೈಕ್ ನ ಹಿಂಬದಿಗೆ ಕುಳಿತಿದ್ದ ಉಡಂಗಲ್ ನ ನಾಗೇಶ ನಾಯಕ ಗಾಯಗೊಂಡಿದ್ದಾರೆ.
ಇವರು ಬೈಕ್ ಮೇಲೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದಾಗ, ಎದುರಿನಿಂದ ವಾಹನವೊಂದನ್ನು ಓವರ್ ಟೇಕ್ ಮಾಡಿಕೊಂಡು ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಬೈಕ್ ಚಲಾಯಿಸುತ್ತಿದ್ದ ನರಸಿಂಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ನಾಗೇಶ ಅವರನ್ನು ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೃತ ನರಸಿಂಹ ಕ್ಯಾಮರಾಮನ್ ಆಗಿದ್ದು, ಯಲ್ಲಾಪುರದ ಪ್ರವಾಸಿ ತಾಣಗಳಿಗೆ ಹೊರಟಿದ್ದರು ಎನ್ನಲಾಗಿದೆ.
ಡಿಕ್ಕಿ ಹೊಡೆದ ಟ್ಯಾಂಕರ್ ಚಾಲಕನ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೋಗಿದ್ದಾನೆ. ಮುಂದೆ ಹೋಗಿ ಕಿರವತ್ತಿಯ ಚೆಕ್ ಪೊಸ್ಟ್ ಬಳಿ ಲಾರಿ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







