ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮೈಲುಗಲ್ಲು ಎಂದು ಭಾವಿಸಲಾಗಿದ್ದ `ಟುಪಲೇವ್ 142-ಎಂ’ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾದ ಕೆಲವೇ ಕ್ಷಣದಲ್ಲಿ ಮುಕ್ತ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ.
ಕಡಲತೀರದಲ್ಲಿ ಯುದ್ಧನೌಕೆ ಹಾಗೂ ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣ ಕಾರವಾರವಾಗಿದ್ದು, ಇದನ್ನು ನೋಡಲು ಬರುವವರಿಗೆ ನಿರಾಸೆಯಾಗಿದೆ. 2017ರಲ್ಲಿ ನಿವೃತ್ತಿ ಹೊಂದಿದ ಈ ಯುದ್ಧ ವಿಮಾನ 53.6 ಮೀ ಉದ್ದ ಮತ್ತು 35 ಮೀ ಅಗಲವಿದೆ. `ಐ ಎನ್ ಎಸ್ ಚಪಲ್’ ಯುದ್ಧನೌಕೆ ಪಕ್ಕದಲ್ಲಿ `ಟುಪಲೇವ್ 142-ಎಂ’ ಯುದ್ಧ ವಿಮಾನವನ್ನು ಇರಿಸಿದ್ದರಿಂದ ಹೆದ್ದಾರಿ ಪ್ರಯಾಣಿಸುವ ಅನೇಕರು ಇದರ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆದರೆ, ಯುದ್ಧ ವಿಮಾನದ ಬಾಗಿಲು ಮುಚ್ಚಿರುವುದರಿಂದ ನಿರಾಸೆಯಿಂದ ಮರಳುತ್ತಿದ್ದಾರೆ.
ತಮಿಳುನಾಡಿನ ಅರಕ್ಕೋಣದಲ್ಲಿರುವ ರಾಜೋಲಿ ನೌಕಾನೆಲೆಯಿಂದ ಕಾರವಾರ ಕಡಲತೀರಕ್ಕೆ 9 ತಿಂಗಳ ಹಿಂದೆ ಈ ವಿಮಾನ ತರಲಾಗಿದೆ. ಇದರ ಸಾಗಾಟ ಹಾಗೂ ಮರುಜೋಡಣೆಯ ಹೊಣೆ ನೌಕಾನೆಲೆಯದ್ದಾಗಿದ್ದು, ವಿಮಾನದಲ್ಲಿ ಹವಾನಿಯಂತ್ರಕ (ಎಸಿ) ಅಳವಡಿಸುವ ಕಾರ್ಯ ಬಾಕಿ ಇರುವ ಹಿನ್ನಲೆ ಉದ್ಘಾಟನೆ ಆದ ಕೆಲವೇ ಕ್ಷಣದಲ್ಲಿ ಅದರ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಇದರ ನಿರ್ವಹಣೆಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆವಹಿಸಿಕೊಂಡಿದೆ.
Discussion about this post