ಬಂಗಾರ, ಹಣ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಜೊಯಿಡಾ ತಾಲೂಕಿನ ಅಣಶಿಯ ಕೂಣೆಮಣದ ಸಮೀರ್ ಸೂರಜ ಪಾಟೀಲ ಬಂಧಿತ ವ್ಯಕ್ತಿ. ಈತ ಕಳೆದ ನವೆಂಬರ್ 1 ರಂದು ಕಣ್ಣಿಗೇರಿ ಸಮೀಪದ ಸಾರಬೈಲಿನ ಮಿಲಾಗ್ರಿ ಸುನೀಲ್ ವಾಜ್ ಅವರ ಮನೆಯೊಳಗೆ ಹೊಕ್ಕು 17 ಗ್ರಾಂ ಬಂಗಾರ ಹಾಗೂ 25 ಗ್ರಾಂ ಬೆಳ್ಳಿ ಸೇರಿ ಒಟ್ಟು 1.13 ಲಕ್ಷ ರೂ ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದ.
ಕಳೆದ ನವೆಂಬರ್ 21 ರಂದು ಯಲ್ಲಾಪುರದ ಬೆಲ್ ರಸ್ತೆ ಪಕ್ಕ ತಾ.ಪಂ ಕಾರ್ಯಾಲಯದ ಬಳಿ ಇರುವ ಸೀತಾಲಕ್ಷ್ಮೀ ಮೆಡಿಕಲ್ಸ್ ನಿಂದ 45 ಸಾವಿರ ರೂ ಹಣ ಕಳ್ಳತನ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ವಿಚಾರವನ್ನು ಬಂಧಿತ ಸಮೀರ್ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಈತ ಅಂತರ್ ಜಿಲ್ಲಾ ಕಳ್ಳ ಎಂಬುದು ತಿಳಿದು ಬಂದಿದೆ. ಉತ್ತರಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 12 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ.







