ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸ್ಸು ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಯೋಜನೆ ಈ ಬಾರಿಯಾದರೂ ನನಸಾಗಲಿ ಎಂದು ಜನ ಆಶಿಸಿದ್ದಾರೆ.
ಈ ಬಾರಿ ರೈಲ್ವೆ ಸಚಿವರಾಗಿ ರಾಜ್ಯದ ಸೋಮಣ್ಣ ಆಯ್ಕೆಯಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕ ಸೇತುವೆಯಾಗಿರುವ ಯೋಜನೆ ಕಾರ್ಯರೂಪಕ್ಕೆ ತರಬೇಕು ಎನ್ನುವುದು ಹಲವರ ಒತ್ತಾಯ. ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಯೋಜನೆ 1996-97ರಲ್ಲಿ ಅನುಮೋದನೆಗೊಂಡಿತ್ತು. ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಯೋಜನೆ ವಿವಿಧ ಕಾರಣಗಳಿಂದಾಗಿ ಇನ್ನೂ ಸಹ ಪೂರ್ಣಗೊಂಡಿಲ್ಲ.
ಈ ರೈಲ್ವೆ ಯೋಜನೆಯ ಅಂತಿಮ ಸಮೀಕ್ಷೆ 2024ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಸುಮಾರು 164 ಕಿ ಮೀ ಉದ್ದದ ರೈಲು ಮಾರ್ಗ ಇದಾಗಿದೆ. ನೆನೆಗುದಿಗೆ ಬಿದ್ದಿದ್ದ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಗೆ ಮರುಜೀವ ಈ ಮಾರ್ಗದಲ್ಲಿ ಬರುವ ರೈಲು ನಿಲ್ದಾಣಗಳ ಮರು ವಿನ್ಯಾಸ, ನಿರ್ಮಾಣ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಪ್ರಕಾರ ಹುಬ್ಬಳ್ಳಿ ನೈಋತ್ಯ ರೈಲ್ವೆ ಪ್ರಧಾನ ಕಚೇರಿ ಇರುವ ಸ್ಥಳವಾದರೆ, ಅಂಕೋಲಾ ಕೊಂಕಣ ರೈಲ್ವೆಯ ಪ್ರಧಾನ ಜಂಕ್ಷನ್ ಆಗಿದೆ. ಯೋಜನೆಯಂತೆ ಹುಬ್ಬಳ್ಳಿಯಿಂದ ಹೊರಡುವ ರೈಲು ಕಲಘಟಗಿ, ಕಿರವತ್ತಿ, ಯಲ್ಲಾಪುರ, ಇಡಗುಂದಿ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾವನ್ನು ತಲುಪಲಿದೆ.
ಕೊಂಕಣ ರೈಲು ಮಾರ್ಗಕ್ಕೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸೇರುವುದರಿಂದ ಅಂಕೋಲಾ ರೈಲು ನಿಲ್ದಾಣದ ಹೊರ ಮತ್ತು ಒಳ ವಿನ್ಯಾಸ ಬದಲಾಗಲಿದೆ. ಇದಕ್ಕೆ ಪೂರಕವಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ನಿಲ್ದಾಣದ ಮರು ನಿರ್ಮಾಣದ ನಕ್ಷೆಯನ್ನು ಸಿದ್ಧಪಡಿಸಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅರಣ್ಯದ ಮೂಲಕ ಹಾದು ಹೋಗುತ್ತದೆ. ಈ ಯೋಜನೆಗೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್ನಲ್ಲಿ ನೀಡಿದ್ದ ಅನುಮೋದನೆಯನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದ್ದು, ಅರ್ಜಿಯ ವಿಚಾರಣೆಯ ವೇಳೆ ನೈಋತ್ಯ ರೈಲ್ವೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗುತ್ತದೆ ಎಂದು ಹೈಕೋರ್ಟ್ಗೆ ಹೇಳಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್ ಈ ಯೋಜನೆ ಕುರಿತು ದಾಖಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.
ಹುಬ್ಬಳ್ಳಿಯಿಂದ 34 ಕಿ ಮೀತನಕ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗಿದೆ. ಆದರೆ ಉಳಿದ ಮಾರ್ಗ ಅರಣ್ಯದ ಮೂಲಕ ಹಾದು ಹೋಗಬೇಕಿದೆ. ಆದ್ದರಿಂದ ಯೋಜನೆಗೆ ಅನುಮೋದನೆ ಸಿಗುವುದು, ಅರಣ್ಯ ಇಲಾಖೆ ಒಪ್ಪಿಗೆ ಪಡೆಯುವುದು ಸೇರಿ ವಿವಿಧ ಕಾರಣಕ್ಕೆ ಯೋಜನೆ ವಿಳಂಬವಾಗಿದೆ. 2023ರ ಜೂನ್‌ನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್ ಕರೆದಿತ್ತು. ಮಾರ್ಗ ಸಮೀಕ್ಷೆ, ಮಣ್ಣಿನ ಪರೀಕ್ಷೆ, ಯಾರ್ಡ್ ನಕ್ಷೆ, ಸೇತುವೆ ನಿರ್ಮಾಣ ಲೆಕ್ಕಾಚಾರ ಇತ್ಯಾದಿಗಳ ಕುರಿತು ಅಂತಿಮ ವರದಿ ತಯಾರು ಮಾಡಲು 13.48 ಕೋಟಿ ರೂ ಟೆಂಡರ್ ನೀಡಿತ್ತು. ಈಗ ಅಂತಿಮ ಸ್ಥಳ ಸಮೀಕ್ಷೆ ತಯಾರಿ ಅಂತಿಮ ಹಂತದಲ್ಲಿದೆ.
Discussion about this post