ಕಾರವಾರ: `ಮಳೆಗಾಲದ ಅವಧಿಯಲ್ಲಿ ಡೆಂಗ್ಯೂ ರೋಗ ಹೆಚ್ಚಾಗದಂತೆ ಮುನ್ನಚ್ಚರಿಕೆವಹಿಸಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು.
ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು `ಗ್ರಾಮ ಪಂಚಾಯತ್’ಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಡೆ ಸ್ವಚ್ಚತೆ ಕಾಪಾಡಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಗೂಡಂಗಡಿಗಳಲ್ಲಿ ಬಳಸಿ ಬಿಸಾಡುವ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದ್ದು, ಈ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚಿಸಿದರು. ಈ ಬಗ್ಗೆ ನಿರ್ಲಕ್ಷವಹಿಸಿದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
`ಆರೋಗ್ಯ ಇಲಾಖೆಯ ಮೂಲಕ ಈಗಾಗಲೇ ಶಾಲಾ ಶಿಕ್ಷಕರಿಗೆ ಡೆಂಗ್ಯೂ ನಿಯಂತ್ರಣ ಕ್ರಮಗಳ ಕುರಿತಂತೆ ತರಬೇತಿಯನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತು ಇತರೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಿ ಅವರ ಮೂಲಕ ಮನೆ ಮನೆಗಳಿಗೆ ಜಾಗೃತಿ ಮೂಡುವಂತೆ ಮಾಡಬೇಕು’ ಎಂದರು.
`ಜಿಲ್ಲೆಗೆ ಉದ್ಯೋಗ ಅರಸಿ ಬರುವ ಕಾರ್ಮಿಕರ ಮೂಲಕ ಡೆಂಗ್ಯೂ ಹರಡುವ ಸಂಭವವಿದ್ದು, ವಲಸೆ ಕಾರ್ಮಿಕರು ಆಗಮಿಸಿದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದರು.
Discussion about this post