ನಾಲ್ಕು ದಶಕಗಳ ಹಿಂದೆ ನಡೆದ ಕೊಪ್ಪರಿಗೆ ಕಳ್ಳತನ ಪ್ರಕರಣದಲ್ಲಿ ದೂರುದಾರ-ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಮಾತ್ರ ಸಾವನಪ್ಪಿರಲಿಲ್ಲ. ಆಗ ಇನ್ನೂ ಹುಟ್ಟಿರದ ಪೊಲೀಸರು, ಇದೀಗ ಪ್ರಕರಣದ ಬೆನ್ನುಬಿದ್ದು ನೆರೆರಾಜ್ಯಕ್ಕೆ ತೆರಳಿ `ಕೊಪ್ಪರಿಗೆ ಕಳ್ಳತನ’ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ನಾಲ್ಕು ದಶಕಗಳ ಹಿಂದೆ ಯಲ್ಲಾಪುರದ ತಟಗಾರದ ಬೋಳಪಾಲದಲ್ಲಿ ಕಬ್ಬಿಣದ ಗಾಣ ಹಾಗೂ ಕೊಪ್ಪರಿಗೆ ಕಳ್ಳತನವಾಗಿತ್ತು. ಈ ಬಗ್ಗೆ ನಾರಾಯಣ ವೆಂಕಟರಮಣ ಭಟ್ಟ ಎಂಬಾತರು 1982ರ ಏಪ್ರಿಲ್ 1ರಂದು ಕಬ್ಬಿಣದ ಕೊಪ್ಪರಿಗೆ ಕಳ್ಳತನವಾದ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಆಗ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಗಾಣದಸಮೇತ ಕಳ್ಳನೊಬ್ಬನನ್ನು ಬಂಧಿಸಿದ್ದರು. ಆದರೆ, ಆತನಿಗೆ ಸಹಾಯ ಮಾಡಿದ್ದ ಇನ್ನೊಬ್ಬ ಪರಾರಿಯಾಗಿದ್ದು, ದೂರುದಾರ ಹಾಗೂ ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಸಾವು ಕಂಡಿರಲಿಲ್ಲ!
ಈ ಪ್ರಕರಣ ಅನೇಕ ವರ್ಷಗಳಿಂದ ಬಾಕಿಯಿರುವ ಬಗ್ಗೆ ಕಡತದಲ್ಲಿ ಕಾಣಿಸುತ್ತಿದ್ದು ಈಗಿನ ಪೊಲೀಸರು ಅದರ ಬೆನ್ನು ಬಿದ್ದಿದ್ದರು. ಆಗ ಅವರ ಪೊಲೀಸರ ಬಳಿ ಆತನ ಬಗ್ಗೆ ಯಾವುದೇ ಸುಳಿವು ಸಹ ಇರಲಿಲ್ಲ. ಅನೇಕ ಹಿರಿಯರನ್ನು ಮಾತನಾಡಿಸಿದಾಗ `ಅಂತೋನಿ’ ಎಂಬ ಹೆಸರು ಕೇಳಿಸಿತು. ಅಲ್ಲಲ್ಲಿ ತಡಕಾಡಿದಾಗ ಆತನ ಫೋಟೋ ಒಂದು ಸಿಕ್ಕಿತು. ಅಂತೋನಿಯ ಸಂಬAಧಿಕರನ್ನು ಹುಡುಕಾಡಿದಾಗ ಅವರೆಲ್ಲ ಗೋವಾದಲ್ಲಿರುವ ಬಗ್ಗೆ ಗೊತ್ತಾಯಿತು. ಅಂತೋನಿ ಸಹ ಅಲ್ಲೇ ಇರುವುದಾಗಿ ಕೆಲವರು ಹೇಳಿದರು. ಅಂತೋನಿಯನ್ನು ಹುಡುಕಿ ಗೋವಾಗೆ ಹೊರಟ ಪೊಲೀಸರಿಗೆ ಆತ ಸಹ 2 ವರ್ಷದ ಹಿಂದೆ ಅಪಘಾತದಲ್ಲಿ ಸಾವನಪ್ಪಿರುವ ಬಗ್ಗೆ ತಿಳಿಯಿತು.
ಆತನ ಮರಣಪತ್ರದೊಂದಿಗೆ ಯಲ್ಲಾಪುರಕ್ಕೆ ಬಂದ ಪೊಲೀಸರು ಕೊನೆಗೂ ಪ್ರಕರಣಕ್ಕೆ ಇತಿಶ್ರೀ ಹಾಡಿದರು. ಪ್ರಕರಣದ ಸಲುವಾಗಿ ಗೋವಾಗೆ ತೆರಳಿದ ಎಲ್ಲಾ ಪೊಲೀಸರು 40 ವರ್ಷದ ಒಳಗಿನವರೇ ಆಗಿದ್ದು, ಈ ಕಳ್ಳತನ ನಡೆದಾಗ ಅವರೆಲ್ಲರೂ ಹುಟ್ಟಿರಲೇ ಇಲ್ಲ!




Discussion about this post