ಯಲ್ಲಾಪುರ: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯನ್ನು ಮಹಿಳಾ ಕಾಂಗ್ರೆಸ್ ಟೀಕಿಸಿದ್ದು, ಇದೀಗ ಬಿಜೆಪಿ ಮಹಿಳಾ ಮೋರ್ಚಾ ತಿರುಗೇಟು ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಶುರುವಾದ ಈ `ಜಡೆ ಜಗಳ’ ಎರಡೂ ಪಕ್ಷದ `ನಾರಿಶಕ್ತಿ’ ಪ್ರದರ್ಶಿಸಿದೆ.
ಕಾಂಗ್ರೆಸ್ ಬೆಂಬಲಿತ ಮಹಿಳೆಯರು ಸಿದ್ದರಾಮಯ್ಯ ನಡೆಯನ್ನು ಸಮರ್ಥಿಸಿದ್ದಾರೆ. ಬಿಜೆಪಿ ಬೆಂಬಲಿತ ಮಹಿಳೆಯರು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಆದರೆ, ಈ ಎರಡೂ ಕಡೆಯವರ ಧ್ವನಿ ರಾಜ್ಯ ರಾಜಕೀಯದಲ್ಲಿದ್ದವರಿಗೆ ಕೇಳುವಷ್ಟು ದೊಡ್ಡದಾಗಿಲ್ಲ. ಈ ಬಗೆಯ ಹೇಳಿಕೆಗಳು ಸ್ಥಳೀಯ ಸಂಘಟನೆಗೆ ಸಹ ಯಾವುದೇ ಬಗೆಯ ಪರಿಣಾಮ ಬೀರುತ್ತಿಲ್ಲ!
ಅಗಸ್ಟ 8ರಂದು ಐವರು ಕಾಂಗ್ರೆಸ್ ಮಹಿಳೆಯರು ಯಾರದೋ ಮನೆಯಲ್ಲಿ ಕುಳಿತು `ಸಿದ್ದರಾಮಯ್ಯ ಸಾಧನೆ ಸಹಿಸದ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಫೋಟೋ ಜೊತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅಗಸ್ಟ 10ರಂದು ಬಿಜೆಪಿಯ ಏಳು ಮಹಿಳೆಯರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ `ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡವರು ಬಿಜೆಪಿಗರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ಪ್ರತಿ ಬಾರಿ ಪಕ್ಷ ಬದಲಿಸುವವರ ಮಾತಿಗೆ ಸಮಾಜದಲ್ಲಿ ಕಿಮ್ಮತ್ತಿಲ್ಲ’ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
`ಕಾಂಗ್ರೆಸ್ಸಿಗೆ ಜನ ಬೆಂಬಲವಿದೆ’ ಎಂಬುದು ಕಾಂಗ್ರೆಸ್ ಮಹಿಳೆಯರ ವಾದ. `ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನು ಕೊಳ್ಳೆ ಹೊಡೆದಿದೆ’ ಎಂಬುದು ಬಿಜೆಪಿ ಮಹಿಳೆಯರ ದೂರು. `ಕಾಂಗ್ರೆಸ್ ಸರ್ಕಾರ ಬಡವರಿಗೆ ಒಳ್ಳೆಯದು ಮಾಡಿದೆ’ ಎಂದು ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷೆ ಪೂಜಾ ನೇತ್ರೇಕರ್ ಹೇಳಿದರೆ, `ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ರೇಖಾ ಹೆಗಡೆ ಆರೋಪಿಸಿದ್ದಾರೆ.
ಕಾಂಗ್ರೆಸ್ ಪರ ಹೇಳಿಕೆಯನ್ನು ಸರಸ್ವತಿ ಗುನಗ, ಸುನಂದ ದಾಸ್, ನರ್ಮದಾ ನಾಯ್ಕ್,, ಹಲಿಮಾ ಕಕ್ಕೆರಿ ಬೆಂಬಲಿಸಿದ್ದಾರೆ. ಬಿಜೆಪಿ ಹೇಳಿಕೆಯನ್ನು ಶ್ರುತಿ ಹೆಗಡೆ, ಚಂದ್ರಕಲಾ ಭಟ್, ಶ್ಯಾಮಿಲಿ ಪಾಟಣಕರ, ನಿರ್ಮಲಾ ನಾಯ್ಕ ಹಾಗೂ ಸುನಂದಾ ಮರಾಠಿ ಬೆoಬಲಿಸಿದ್ದಾರೆ. ಒಟ್ಟಿನಲ್ಲಿ ಎರಡು ಪಕ್ಷದಲ್ಲಿ ನಡೆಯುತ್ತಿರುವ ಜಡೆ ಜಗಳ ಪಕ್ಷದ ಇತರರ ಇರುಸು-ಮುರುಸಿಗೆ ಕಾರಣವಾಗಿದೆ.
Discussion about this post