6
September 29, 2026

Shiruru | ಲಾರಿ ಇಂಧನ ಸೋರಿಕೆಯ ಶಂಕೆ: ಗಂಗಾವಳಿ ಅಂಚಿನಲ್ಲಿ ಡಿಸೇಲ್ ವಾಸನೆ!

ಮಳೆ ಕಡಿಮೆ ಆದ ಕಾರಣ ಗಂಗಾವಳಿ ನದಿ ಶಾಂತಗೊoಡಿದ್ದು, ಶಿರೂರು ಭಾಗದಲ್ಲಿ (Shiruru) ನದಿ ಪಾಲಾಗಿರುವ ಅರ್ಜುನನ ಲಾರಿ ಹಾಗೂ ಕಣ್ಮರೆಯಾದವರ ಶವ ಹುಡುಕಾಟ ನಡೆಯುತ್ತಿದೆ. ಈ ನಡುವೆ ಲಾರಿಯ ಡೀಸೆಲ್ ಸೋರಿಕೆಯಾಗುತ್ತಿರುವ ಸಂಗತಿ ಹೊರಬಿದ್ದಿದೆ. ಮಣ್ಣಿನ ಆಳದಿಂದ ಡೀಸೆಲ್ ಹೊರಬರುತ್ತಿರುವುದನ್ನು ಈಶ್ವರ ಮಲ್ಪೆ ಅವರ ತಂಡದವರು ಖಚಿತಪಡಿಸಿಕೊಂಡಿದ್ದಾರೆ.

ಶಿರೂರು ಗುಡ್ಡ ಕುಸಿತದ ಪರಿಣಾಮ 8 ಮಂದಿ ಸಾವನಪ್ಪಿದ್ದು, ಮೂವರು ನಾಪತ್ತೆಯಾಗಿದ್ದರು. ಗುಡ್ಡದ ತಪ್ಪಲಿನಲ್ಲಿದ್ದ ಲಾರಿ ಗಂಗಾವಳಿ ನದಿ ಪಾಲಾಗಿತ್ತು. ಸಾಕಷ್ಟು ಹುಡುಕಾಟದ ನಂತರ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಲಾರಿಯ ಕೆಲ ಅವಶೇಷಗಳು ಪತ್ತೆಯಾಗಿತ್ತು. ನದಿ ಆಳದಲ್ಲಿ ಲಾರಿ ಅವಿತಿದ್ದು, ಅದರ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ನದಿ ಶುರುವಿನಲ್ಲಿರುವ ಕಲ್ಲು-ಮಣ್ಣುಗಳ ಅಡಿಯಿಂದ ಡೀಸೆಲ್ ಹೊರಬರುತ್ತಿದೆ. ಹೀಗಾಗಿ ಲಾರಿ ಅಲ್ಲಿಯೇ ಇರುವ ಅನುಮಾನ ಹೆಚ್ಚಾಗಿದೆ.

ಪ್ರಸ್ತುತ ಶಿರೂರು ಗುಡ್ಡ ಕುಸಿತದ ಪರಿಣಾಮ ನದಿ ಆಳ ಸೇರಿರುವ ಲಾರಿಯ ಶೋಧ ಕಾರ್ಯಾಚರಣೆ ಚುರುಕಾಗಿದೆ. ಈಶ್ವರ ಮಲ್ಪೆ ಅವರ ಜೊತೆ ಮತ್ತೆ ಇಬ್ಬರು ಮುಳುಗು ತಜ್ಞರು ನೀರಿನ ಆಳಕ್ಕೆ ಇಳಿದಿದ್ದಾರೆ. ಒಮ್ಮೆ ನೀರಿಗೆ ಇಳಿದ ನಂತರ ಸತತ 2 ತಾಸುಗಳ ಕಾಲ ಅವರು ಶೋಧ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ನೀರಿನಲ್ಲಿ ಡಿಸೆಲ್ ಅಂಶ ಪತ್ತೆಯಾದಾಗ ಮೊದಲು ಅದು ಬೋಟಿನ ಡೀಸೆಲ್ ಎಂದು ಅನುಮಾನಿಸಲಾಗಿತ್ತು. ಆದರೆ, ಬೋಟು ಬರುವ ಮೊದಲಿನಿಂದಲೂ ಡೀಸೆಲ್ ಅಂಶ ಇರುವ ಬಗ್ಗೆ ಗೊತ್ತಾಗಿದ್ದು, ಆ ಪ್ರದೇಶದಲ್ಲಿ ಕಬ್ಬಿಣದ ರಾಡ್ ಮೂಲಕ ಅಗೆದಾಗ ಡೀಸೆಲ್ ಬರುವ ಪ್ರಮಾಣ ಇನ್ನಷ್ಟು ಬಿರುಸಾಗಿದೆ. ಆ ಭಾಗದಲ್ಲಿದ್ದ ನೀರನ್ನು ತಳ್ಳಿದ ನಂತರವೂ ಮತ್ತೆ ಅದೇ ಭಾಗದಲ್ಲಿ ಹೊಸದಾಗಿ ಡೀಸೆಲ್ ಅಂಶ ಪತ್ತೆಯಾಗಿದೆ. ಸಣ್ಣ ಪುಟ್ಟ ಕಲ್ಲು ಸರಿಸಿದ ನಂತರವೂ ಡೀಸೆಲ್ ಅಂಶ ಕಾಣಿಸಿಕೊಂಡಿದೆ.
ಆ ಜಾಗ ಹೊರತುಪಡಿಸಿ ಬೇರೆ ಎಲ್ಲಿಯೂ ಡೀಸೆಲ್ ಅಂಶ ಕಾಣಿಸಿಲ್ಲ.

Leave a Reply

Your email address will not be published. Required fields are marked *

You cannot copy content of this page