ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಅಗಸ್ಟ ಮೊದಲ ವಾರದಲ್ಲಿಯೇ ಪ್ರವಾಸೋದ್ಯಮ ( Tourism ) ಚಟುವಟಿಕೆಗಳು ಗರಿಗೆದರುತ್ತಿದ್ದು, ಈ ವರ್ಷ ಈವರೆಗೂ ಪ್ರವಾಸೋದ್ಯಮದ ಬಾಗಿಲು ತೆರೆದುಕೊಂಡಿಲ್ಲ. ಬಹುತೇಕ ಜಲಪಾತಗಳಿಗೆ ಅರಣ್ಯ ಇಲಾಖೆ ನಿಷೇಧ ಹೇರಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರವಾಸೋದ್ಯಮ ಚಟುವಟಿಕೆಯನ್ನು ನಂಬಿರುವ ಹೋಟೆಲ್, ಹೋಂ ಸ್ಟೇ ಹಾಗೂ ರೆಸಾರ್ಟ ಮಾಲಕರು ಇದರಿಂದ ಕಂಗಾಲಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ ಅಧೀನದಲ್ಲಿರುವ ಗ್ರಾಮ ಅರಣ್ಯ ಸಮಿತಿಯವರ ಪ್ರವಾಸಿತಾಣಗಳ ( Tourism ) ನಿರ್ವಹಣೆ ನಡೆಯುತ್ತಿದೆ. ಜಲಪಾತ ವೀಕ್ಷಣೆಗೆ ಆಗಮಿಸುವವರಿಂದ ಗ್ರಾಮ ಅರಣ್ಯ ಸಮಿತಿಯವರು ಶುಲ್ಕ ಪಡೆದು ಪ್ರವೇಶ ನೀಡುತ್ತಾರೆ. ಆದರೆ, ಮಳೆಗಾಲ ಶುರುವಾದ ನಂತರ ಬಹುತೇಕ ಜಲಪಾತಗಳ ಪ್ರವೇಶ ನಿಷೇಧಿಸಲಾಗಿದ್ದು, ಮಳೆ ಕಡಿಮೆಯಾದರೂ ಅಲ್ಲಿನ ನಿಷೇಧ ತೆರವಾಗಿಲ್ಲ. ಇದರಿಂದ ಗ್ರಾಮ ಅರಣ್ಯ ಸಮಿತಿಯವರ ಆದಾಯಕ್ಕೂ ಸಮಸ್ಯೆಯಾಗಿದೆ. ಪ್ರಸ್ತುತ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಸಾತೋಡ್ಡಿ ಜಲಪಾತಕ್ಕೆ ಪ್ರವೇಶವಿಲ್ಲ. ಮಾಗೋಡು ಜಲಪಾತಕ್ಕೆ ತೆರಳುವ ರಸ್ತೆ ಕುಸಿದಿದ್ದು, ಪರ್ಯಾಯ ರಸ್ತೆ ನಿರ್ಮಾಣವಾಗಿಲ್ಲ. ಅರಣ್ಯ ಸಮಿತಿ ಹಾಗೂ ವ್ಯಕ್ತಿಯೊಬ್ಬರ ಜಟಾಪಟಿಯಲ್ಲಿ ಅರಬೈಲ್ ಘಟ್ಟ ಪ್ರದೇಶದಲ್ಲಿರುವ ಶಿರಲೆ ಜಲಪಾತಕ್ಕೆ ಪ್ರವೇಶವಿಲ್ಲದೇ ಮೂರು ವರ್ಷ ಕಳೆದಿದೆ. ಕುಳಿ ಮಾಗೋಡು ಜಲಪಾತದ ಪ್ರವೇಶವನ್ನು ಸಹ ಅರಣ್ಯ ಇಲಾಖೆ ನಿಷೇಧಿಸಿದೆ. ಇದನ್ನು ಹೊರತುಪಡಿಸಿ ಅಂಕೋಲಾದ ಬೆಣ್ಣಹಳ್ಳ ಜಲಪಾತ, ವಿಭೂತಿ ಜಲಪಾತ, ಕಾರವಾರದ ಗೋಲಾರಿ ಜಲಪಾತ, ನಾಗರಮುಡಿ ಜಲಪಾತ ಸೇರಿ ಹಲವು ಜಲಪಾತಗಳಿಗೆ ಪ್ರವೇಶವಿಲ್ಲ. ಪ್ರವಾಸೋದ್ಯಮ ಬೆಳವಣಿಗೆಯಿಂದ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗೆ ಅವಕಾಶವಿದ್ದರೂ ಅರಣ್ಯ ಇಲಾಖೆಯ ಅಡ್ಡಗಾಲಿನಿಂದ ಇದ್ಯಾವ ಕೆಲಸವೂ ನಡೆಯುತ್ತಿಲ್ಲ.
ಇನ್ನೂ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜನಕ್ಕಾಗಿ ಖಾಸಗಿಯವರಿಗೆ ಟೆಂಡರ್ ನೀಡಲಾಗುತ್ತಿದೆ. ಅಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಪ್ರದೇಶದ ನಿರ್ವಹಣೆಯ ಹೊಣೆಯನ್ನು ಖಾಸಗಿಯವರುವಹಿಸಿಕೊಂಡಿದ್ದು, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಖಾಸಗಿಯವರ ಮೇಲೆ ನಿಗಾ ಇರಿಸಿ ಅಗತ್ಯ ಸಲಹೆಗಳನ್ನು ನೀಡುತ್ತಿದೆ. ಆದರೆ, ಮಲೆನಾಡು ಭಾಗದಲ್ಲಿ ಗ್ರಾಮ ಅರಣ್ಯ ಸಮಿತಿಯವರು ಅಗತ್ಯ ಸಿಬ್ಬಂದಿ ನೇಮಿಸುವಷ್ಟು ಆರ್ಥಿಕ ಸಾಮರ್ಥ್ಯ ಹೊಂದಿಲ್ಲ. ಖಾಸಗಿಯವರಿಗೆ ನಿರ್ವಹಣೆ ಕೊಡಲು ಮನಸ್ಸು ಮಾಡುತ್ತಿಲ್ಲ. ಇಲ್ಲಿ ಯಾವುದೇ ಅವಘಡ ನಡೆದರೂ ಗ್ರಾಮ ಅರಣ್ಯ ಸಮಿತಿಯವರನ್ನು ಹೊಣೆಗಾರರನ್ನಾಗಿ ಮಾಡುವ ಆತಂಕದ ಹಿನ್ನಲೆ ಸಮಿತಿಯವರು ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶವನ್ನು ನೀಡುತ್ತಿಲ್ಲ.
`ಪ್ರವಾಸೋದ್ಯಮ ತಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದಲ್ಲಿ ಸರ್ಕಾರಕ್ಕೆ ಆದಾಯ ಬರುವ ಜೊತೆ ಸುರಕ್ಷತೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಯೂ ನಡೆಯುತ್ತದೆ. ಆದರೆ, ಅರಣ್ಯ ವ್ಯಾಪ್ತಿಯಲ್ಲಿ ಬರುವ ಜಲಪಾತಗಳ ಬಗ್ಗೆ ಗ್ರಾಮ ಅರಣ್ಯ ಸಮಿತಿಯವರು ತಮ್ಮ ಹಕ್ಕಿನ ಬಗ್ಗೆ ಹೇಳುತ್ತಿದ್ದು, ಇದರಿಂದ ಪ್ರವಾಸೋದ್ಯಮ ಚಟುವಟಿಕೆಗೆ ಹಿನ್ನಡೆ ಆದ ಬಗ್ಗೆ ಅಧಿಕೃತ ದೂರು ಬಂದಲ್ಲಿ ತಕ್ಷಣ ಕ್ರಮ ಜರುಗಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಅವರು ತಿಳಿಸಿದರು.





