ಸಿದ್ದಾಪುರ: ಅಡಿಕೆ ವ್ಯಾಪಾರ ಮಾಡಿ ಬದುಕುತ್ತಿದ್ದ ಮಹಮದ್ ಅಬ್ದುಲ್ ಸಾಬ್ (27) ಎಂಬಾತರ ಶೆಡ್ಡಿನಲ್ಲಿದ್ದ 4 ಚೀಲ ಅಡಿಕೆ ಕಳ್ಳರ ಪಾಲಾಗಿದೆ.
ಇಟಕಿ ಆಲದಕಟ್ಟಿಯಲ್ಲಿ ವಾಸವಾಗಿರುವ ಮಹಮದ್ ತಮ್ಮ ಮನೆ ಮುಂದೆ ಶೆಡ್ ನಿರ್ಮಿಸಿದ್ದರು. ಅಲ್ಲಿ ಅಡಿಕೆ ದಾಸ್ತಾನು ಮಾಡಿಕೊಂಡಿದ್ದರು. ಸೆಪ್ಟೆಂಬರ್ 2ರ ಬೆಳಗ್ಗೆ 2 ಗಂಟೆ ಅವಧಿಯಲ್ಲಿ ಬೈಕ್ ಮೂಲಕ ಬಂದ ಇಬ್ಬರು ಅಪರಿಚಿತರು ಅಡಿಕೆ ದೋಚಿ ಪರಾರಿಯಾಗಿದ್ದಾರೆ. KA 31 ED 5923 ನೊಂದಣಿಯ ಬೈಕ್ ಅದಾಗಿದ್ದು, ಕಳ್ಳರ ಗುರುತು ಗೊತ್ತಾಗಿಲ್ಲ.
ಮಹಮದ್ ಅವರು ತಲಾ 60 ಕೆಜಿಯಂತೆ ಚಾಲಿ ಅಡಿಕೆಯನ್ನು ಚೀಲ ಮಾಡಿ ಇಟ್ಟಿದ್ದರು. ಆ ಪೈಕಿ 4 ಅಡಿಕೆ ಚೀಲ ನಾಪತ್ತೆಯಾಗಿದ್ದು, ಇದರಿಂದ 72 ಸಾವಿರ ರೂ ನಷ್ಟವಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.




