ಲಾಟರಿ ನಿಷೇಧ ಜಾರಿಯಾಗಿ ಅನೇಕ ವರ್ಷ ಕಳೆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಟರಿ ಬಗೆಯ `ಲಕ್ಕಿ ಡ್ರಾ’ ಪದ್ಧತಿ ದೂರವಾಗಿಲ್ಲ. ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಸಹ ಈ ಪದ್ಧತಿ ಜಾರಿಯಲ್ಲಿದ್ದು, ಲಕ್ಕಿ ಡ್ರಾ ಹೆಸರಿನಲ್ಲಿ ವಿಜೇತರಿಗೆ ವಿವಿಧ ವಸ್ತುಗಳನ್ನು ನೀಡಲಾಗುತ್ತಿದೆ. ಗಣೇಶ ಉತ್ಸವ ಸೇರಿದಂತೆ ಎಲ್ಲಾ ಕಡೆ ಈ ಬಗೆಯ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಇದೀಗ ಜಿಲ್ಲಾಡಳಿತ ಸೂಚಿಸಿದೆ.
2007ರಿಂದ ಲಾಟರಿ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು ಬಹುಮಾನ ಯೋಜನೆ, ಹಬ್ಬ-ಉತ್ಸವ ಸೇರಿದಂತೆ ಎಲ್ಲಾ ಕಡೆ ಲಾಟರಿ ಮಾರಾಟ-ಖರೀದಿ ಅಪರಾಧ. ಇದನ್ನು ತಡೆಯುವುದಕ್ಕಾಗಿ ವಾಣಿಜ್ಯ ತೆರಿಗೆ, ಪೊಲೀಸ್ ಹಾಗೂ ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಅದಾಗಿಯೂ ಲಾಟರಿ ಬಗೆಯ ಆಮೀಷ ಒಡ್ಡುತ್ತಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ತಿಳಿಸುವಂತೆ ಜಿಲ್ಲಾಡಳಿತ ಹೇಳಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿರುವ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಮಾಹಿತಿ ನೀಡಿದ್ದಾರೆ.