15 ವರ್ಷಗಳಿಂದ ಗೌಳಿ ಸಮುದಾಯದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಯಲ್ಲಾಪುರದ ಗೌಳಿವಾಡಾ ಶಾಲಾ ಶಿಕ್ಷಕ ಗಂಗಾಧರ ಲಮಾಣಿ ವಿಭಿನ್ನ ಪ್ರಯತ್ನಗಳ ಮೂಲಕ ಗಮನ ಸೆಳೆದಿದ್ದಾರೆ.
ಮಕ್ಕಳ ಕಲಿಕೆಗಾಗಿ ಅವರು ಆಯೋಜಿಸಿದ ಚಟುವಟಿಕೆಗಳು ಒಂದೆರಡಲ್ಲ. ತಮ್ಮ ಶಾಲೆಯಲ್ಲಿ ಸದಾ ವಿನೂತನ ಕಲಿಕಾ ಪ್ರಕ್ರಿಯೆ ಮೂಲಕ ಅವರು ಗಮನಸೆಳೆಯುತ್ತಿದ್ದಾರೆ. ಗೌಳಿ ಸಮುದಾಯದ ಮೇಲೆ ಮಕ್ಕಳ ಮೂಲಕ ಅಧ್ಯಯನ ನಡೆಸಿದ ಅವರು `ಗೌಳಿಗರ ವಲಸೆ ಅನುಭವ ಕಥನ’ ಎಂಬ ಕೃತಿ ಪ್ರಕಟಿಸಿದ್ದಾರೆ. ಈ ಸಮುದಾಯ ವಿಶಿಷ್ಟ ಜಾನಪದ ಕಲೆಯಾದ `ರದ್ಮಾಲ್ ನೃತ್ಯಕಲೆ’ಯನ್ನು ಕಲಿಕೆಯ ಭಾಗವಾಗಿಸಿ ಪಾಠದ ನಡುವೆ ಹೇಳಿಕೊಡುತ್ತಾರೆ.
ಅವರು ಮುಖ್ಯ ಶಿಕ್ಷಕರಾಗಿ ಪ್ರಭಾರಿಯಾಗಿದ್ದ ತೆಂಗಿನಗೇರೆ ಶಾಲೆಗೆ ಕಟ್ಟಡಗಳಿರಲಿಲ್ಲ. ಅಲ್ಲಿ ಎಸ್‌ಡಿಎಂಸಿ ಸಹ ಅಸ್ತಿತ್ವದಲ್ಲಿರಲಿಲ್ಲ. ಆಗ ಅವರು ಊರಿನವರ ಸಹಕಾರ ಪಡೆದು ಖಾಸಗಿ ಮನೆಯೊಂದರನ್ನು ನವೀಕರಿಸಿ ಬಿಸಿಯೂಟದ ಕೊಠಡಿ ಮಾಡಿದ್ದಾರೆ. ಊರ ಅನುಕೂಲಕ್ಕಾಗಿ ಚಂದಾ ಎತ್ತಿ 4 ಲಕ್ಷ ರೂ ವೆಚ್ಚದಲ್ಲಿ ಅವರು ಶಾಲೆಗೆ ಕಟ್ಟಡವನ್ನು ನಿರ್ಮಿಸಿದ್ದಾರೆ.