ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಆನೆಕಾಲು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕೊಳಚೆ ನೀರು ಈ ಸೊಳ್ಳೆಯ ಉತ್ಪಾದನಾ ಕೇಂದ್ರ!
ಆನೆಕಾಲು ರೋಗಕ್ಕೆ ಕಾರಣವಾದ ಹುಳಗಳು ಮನುಷ್ಯನ ದುಗ್ಧರಸ ಗ್ರಂಥಿಗಳಲ್ಲಿ ವಾಸಿಸುತ್ತದೆ. ಅದರಲ್ಲೂ ಮುಖ್ಯವಾಗಿ ತೊಡೆ ಸಂಧಿಯಲ್ಲಿರುವ ದುಗ್ಧರಸ ಗ್ರಂಥಿ ಅಂದರೆ ಅವುಗಳಿಗೆ ಅಚ್ಚುಮೆಚ್ಚು. ಇದೇ ಕಾರಣದಿಂದ ರೋಗ ಉಲ್ಬಣವಾದಲ್ಲಿ ಕಾಲು ದಪ್ಪವಾಗುತ್ತದೆ. ಆನೆಕಾಲು ರೋಗದಲ್ಲಿ ಪ್ರೌಢ ಹುಳುಗಳು ಸಂತಾನಭಿವೃದ್ಧಿಗಾಗಿ ಲಾರ್ವಾ ಹಂತಗಳನ್ನು (ಮೈಕ್ರೋಫೈಲೇರಿಯಾ) ಬಿಡುಗಡೆ ಮಾಡುತ್ತದೆ. ಈ ಮೈಕ್ರೋಫೈಲೇರಿಯಾವು ರಾತ್ರಿ ವೇಳೆಯಲ್ಲಿ ರಕ್ತದ ಚಲನಾ ವ್ಯೂಹದಲ್ಲಿ ಬರುತ್ತದೆ. ದಿನದ ವೇಳೆಯಲ್ಲಿ ದುಗ್ಧರಸ ಗ್ರಂಥಿಗಳಲ್ಲಿ ಇರುತ್ತದೆ.
ಹೀಗಾಗಿ ಆನೆಕಾಲು ರೋಗವನ್ನು ಪತ್ತೆಹಚ್ಚಲು ರಾತ್ರಿ ವೇಳೆ ರಕ್ತಲೇಪನಗಳನ್ನು ಮಾಡಲಾಗುತ್ತದೆ. ಈ ಮೈಕ್ರೋಫೈಲೇರಿಯಾ ಕ್ಯೂಲೆಕ್ಸ್ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದಾಗ ಅವರ ದೇಹಕ್ಕೆ ಹೋಗಿ, ಅಲ್ಲಿ ಸೋಂಕಿತ ಲಾರ್ವಾವಾಗಿ ಬೆಳವಣಿಗೆ ಹೊಂದುತ್ತವೆ. ಹೀಗಾಗಿ ಆರೋಗ್ಯವಂತ ವ್ಯಕ್ತಿಗೆ ಈ ಸೊಳ್ಳೆ ಕಚ್ಚಿದರೂ ಆ ವ್ಯಕ್ತಿಗೆ ಆನೆಕಾಲು ರೋಗವು ಹರಡುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳು ಆನೆಕಾಲು ರೋಗಕ್ಕೆ ಹೆಚ್ಚಿದೆ. ಅದರಲ್ಲೂ ಕುಮಟಾ ತಾಲೂಕಿನ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ನಗರ ಪ್ರದೇಶಗಳು ಸೊಳ್ಳೆ ವಾಸಕ್ಕೆ ಯೋಗ್ಯ ಪ್ರದೇಶಗಳಾಗಿವೆ. 2004ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 348 ಆನೆಕಾಲು ರೋಗಿಗಳಿದ್ದರು. ಇದೀಗ 129 ಜನ ಈ ರೋಗದಿಂದ ಬಳಲುತ್ತಿದ್ದಾರೆ.