ಗೋಕರ್ಣದ ಹಾರುಮಾಸ್ಕೇರಿಯಲ್ಲಿ ಹುಟ್ಟಿದ ವನಿತಾ ಭಟ್ಟ ಅವರು ಶಿಕ್ಷಕಿಯಾಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ-2ರ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಗೆ ಅವರ ಕೊಡುಗೆ ಅಪಾರ.
ತಮ್ಮ ಜೀವನದುದ್ದಕ್ಕೂ ಶಿಸ್ತು ಹಾಗೂ ಸಮಯ ಪಾಲನೆಯನ್ನು ರೂಡಿಸಿಕೊಂಡಿರುವ ಅವರು ಮಕ್ಕಳಿಗೆ ಸಹ ಅದನ್ನು ಕಲಿಸಿದ್ದಾರೆ. ಹೀಗಾಗಿ ವನಿತಾ ಭಟ್ಟ ಅವರಲ್ಲಿ ಶಿಷ್ಯರೆಲ್ಲರೂ ಇದೀಗ ಅಚ್ಚುಕಟ್ಟಾದ ಜೀವನ ನಡೆಸುತ್ತಿದ್ದಾರೆ. ಮಾತೃ ಹೃದಯದ ಶಿಕ್ಷಕಿಯಾದ ಅವರು ಎಂದಿಗೂ ಮಕ್ಕಳಿಗೆ ಗಟ್ಟಿಯಾಗಿ ಹೊಡೆದದ್ದಿಲ್ಲ. ಪ್ರೀತಿಯಿಂದ ಗದರಿ ತಿಳಿಸಿ ಹೇಳಿದ ಉದಾಹರಣೆಗಳೇ ಸಾವಿರಾರು. ಅವರ ಕಾಯಕ ನೋಡಿದ ಶಿಕ್ಷಣ ಇಲಾಖೆ `ಜನ ಮೆಚ್ಚಿದ ಶಿಕ್ಷಕಿ’ ಎಂಬ ಬಿರುದು ನೀಡಿದೆ.
ವನಿತಾ ಭಟ್ಟ ಅವರಿಗೆ ಮುಖ್ಯ ಶಿಕ್ಷಕಿ ಆಗುವ ಅವಕಾಶ ಸಿಕ್ಕಿತ್ತು. ಆದರೆ, ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಬೇರೆನೂ ಬಯಸದ ಅವರು ಮುಂಬಡ್ತಿಯನ್ನು ನಯವಾಗಿಯೇ ನಿರಾಕರಿಸಿದರು. ಈಗಲೂ ಲವಲವಿಕೆಯಿಂದಿರುವ ಅವರು ನಿವೃತ್ತರಾಗಿದ್ದಾರೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ!
`ತಮ್ಮ ಜೊತೆಯಾಗಿರುವವರು ಖುಷಿಯಾಗಿರಬೇಕು ಎಂದು ಬಯಸುವ ವನಿತಾ ಭಟ್ಟ ಅವರು ನಮಗೆಲ್ಲ ಹಿರಿಯ ಅಕ್ಕನ ಹಾಗಿದ್ದಾರೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ದೊಡ್ಡದು’ ಎಂದು ಮುರುಡೇಶ್ವರದ ದಿವಿಗಿರಿ ಎಲ್‌ಪಿಎಸ್ ಶಾಲಾ ಶಿಕ್ಷಕಿ ಫಾತಿಮಾ ಫ್ರಾನ್ಸಸ್ ಅಭಿಪ್ರಾಯ ಹಂಚಿಕೊoಡರು.
ನಿರoತರ ಅಧ್ಯಯನ, ಅಪಾರವಾದ ಜ್ಞಾನವನ್ನು ಅವರು ಮಕ್ಕಳಿಗೆ ನಿತ್ಯ ಉಣಬಡಿಸಿದ್ದಾರೆ. ಸರಳ ವ್ಯಕ್ತಿತ್ವದ ಮೂಲಕ ಬದುಕು ಕಟ್ಟಿಕೊಂಡಿರುವ ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ನಿವೃತ್ತಿ ನಂತರವೂ ಅವರು ಶಾಲೆಯವರನ್ನು ಉದ್ದೇಶಿಸಿ, `ಏನಾದರೂ ಕೆಲಸ ಇದ್ದರೆ ಮರೆಯದೇ ಕರೆಯಿರಿ’ ಎಂದು ಹೇಳಿ ಹೋಗುವುದನ್ನು ಮರೆಯಲಿಲ್ಲ!



