ಉತ್ತರ ಕನ್ನಡ ಜಿಲ್ಲೆಯ ಹಲವು ಊರುಗಳಿಗೆ ವನ್ಯಜೀವಿ ಪ್ರವೇಶ ಹೊಸದಲ್ಲ. ಆದರೆ, ಯಲ್ಲಾಪುರ ತಾಲೂಕಿನ ಕೆಲ ಗ್ರಾಮದ ಜನರು ಪ್ರತಿ ವರ್ಷ `ಆನೆ ಸಂಕಷ್ಟದಿoದ ಬಳಲುತ್ತಿದ್ದಾರೆ. ಪ್ರತಿ ವರ್ಷ 8-10 ಆನೆಗಳು ಆಗಮಿಸಿ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ಸಮಸ್ಯೆಯಿಂದ ಹೊರಬರುವುದು ಹೇಗೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಹೆಗ್ಗಾಪುರ, ಕರಡೊಳ್ಳಿ, ಹುಲಗೋಡ, ಹುಣಶೆಟ್ಟಿಕೊಪ್ಪ, ಕಳಸೂರು ಭಾಗದಲ್ಲಿ ಆನೆಗಳ ಹಾವಳಿ ನಿರಂತರವಾಗಿದೆ. ಭತ್ತ, ಜೋಳ, ಕಬ್ಬು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಸಹ ಆನೆ ಬಿಟ್ಟಿಲ್ಲ. `5 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದ್ದೆ. ಆನೆದಾಳಿಗೆ ಸಂಪೂರ್ಣ ಬೆಳೆ ಹಾನಿಯಾಗಿದೆ’ ಎಂದು ಹೆಗ್ಗಾಪುರದ ಮೋಹನ ಕೃಷ್ಣ ದೇಸಾಯಿ ಅಳಲು ತೋಡಿಕೊಂಡರು.
`ಇಲ್ಲಿ ಜೋಳ, ಕಬ್ಬು, ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆನೆ ದಾಳಿಯಾಗದಂತೆ ಶಾಶ್ವತ ಯೋಜನೆ ರೂಪಿಸಬೇಕು. ಸದ್ಯ 10 ಆನೆಗಳ ಹಿಂಡು ಊರಿನಲ್ಲಿ ಸಂಚರಿಸುತ್ತಿದ್ದು, ಅವುಗಳ ಸ್ಥಳಾಂತರದ ಬಗ್ಗೆ ಯೋಚಿಸಬೇಕು. ಆದ ಹಾನಿಗೆ ಸೂಕ್ತ ಪರಿಹಾರವನ್ನಾದರೂ ಕೊಡಿಸಬೇಕು’ ಎಂಬುದು ಗ್ರಾಮದೇವಿ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಕೃಷ್ಣ ದೇಸಾಯಿ ಅವರ ಆಗ್ರಹ. `ಕೆಲ ವನ್ಯಜೀವಿಗಳು ರಸ್ತೆಗೆ ಬಂದು ಅಪಘಾತದಿಂದ ಸಾಯುತ್ತಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯದ ಸುತ್ತ ಐಬೆಕ್ಸ್ ಬೇಲಿ ನಿರ್ಮಿಸಬೇಕು’ ಎಂದು ಊರಿನವರು ಹೇಳಿಕೊಂಡರು.