ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆಯೇ ಕಡಿಮೆಯಾಗಿದೆ. ಅದಾಗಿಯೂ ಅಲ್ಲಲ್ಲಿ `ಮನೆ ಖರ್ಚಿನ ಅಕ್ಕಿಗಾದರೂ ಭತ್ತ ಬೆಳೆಯುವ’ ಎನ್ನುವ ರೈತರಿಗೂ ಕೀಟಬಾಧೆ ತೊಂದರೆ ನೀಡುತ್ತಿದೆ.
ಯಲ್ಲಾಪುರ, ಜೊಯಿಡಾ, ಹೊನ್ನಾವರ ಮೊದಲಾದ ಕಡೆ ಭತ್ತ ಬೆಳೆದವರು ಗರಿ ಸುತ್ತುವ ಹುಳದ ಉಪಟಳಕ್ಕೆ ನಲುಗಿದ್ದಾರೆ. ಭತ್ತ ಬೆಳೆಯುವ ಮುನ್ನವೇ ಗದ್ದೆಗೆ ಲಗ್ಗೆ ಇಟ್ಟ ಈ ಹುಳಗಳು ಭತ್ತದ ಎಲೆಗಳನ್ನು ಸುತ್ತುವರೆದಿದ್ದು, ಗಿಡದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ. ಈ ಕೀಟವನ್ನು ಎಲೆ ಸುರುಳಿ ಹುಳು ಅಥವಾ ಬಿಳಿ ಎರಗಲು ಎಂದು ಕರೆಯುತ್ತಾರೆ. ಈ ಕೀಟದ ಮರಿ ಹುಳುಗಳು ಹಸಿರು ಬಣ್ಣದಿದ್ದು, ಭತ್ತದ ಗರಿಗಳ ಎರಡು ಅಂಚನ್ನು ಮಡಿಚಿ ಒಳಗಡೆ ವಾಸಿಸುತ್ತವೆ. ಗಿಡದ ಹಸಿರು ಭಾಗವನ್ನು ಕೆರೆದು ತಿನ್ನುವುದು ಆ ಹುಳಗಳ ಕಾಯಕ. ಈ ಕೀಟ ಭಾದೆಯಿಂದ ತೆನೆ ಉದ್ದ ಮತ್ತು ತೂಕ ಕಡಿಮೆಯಾಗುತ್ತದೆ.
ಗದ್ದೆಯ ಕಾಲುವೆಗಳು ಮತ್ತು ಬದುಗಳ ಮೇಲೆ ಹುಲ್ಲು ಬೆಳೆಯದಂತೆ ನೋಡಿಕೊಂಡರೆ ಮಾತ್ರ ಈ ಕೀಟ ಬರದಂತೆ ತಡೆಯಬಹುದು. ಆದರೆ, ಈಗಾಗಲೇ ಕಷ್ಟಪಟ್ಟು ಭತ್ತ ಬೆಳೆಯುತ್ತಿರುವವರಿಗೆ ಹುಲ್ಲು ಬರೆದಂತೆ ನೋಡಿಕೊಳ್ಳುವುದು ಇನ್ನಷ್ಟು ಕಷ್ಟದ ಕೆಲಸ. ನೊಮೊರಿಯಾ ರಿಲೆ 1 ಗ್ರಾಂ ಅಥವಾ ಬೇವು ಆಧಾರಿತ ಕೀಟನಾಶಕವಾದ ನಿಂಬಿಸಿಡಿನ್ 3 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಶೇ 5ರ ಮುಕ್ಕಡಕ ಸೊಪ್ಪಿನ ನೀರಿನ ಕಷಾಯ ಸಿಂಪಡಣೆ ಮಾಡಿ ಈ ಕೀಟವನ್ನು ಹತೋಟಿಗೆ ತರಬಹುದು ಎಂಬುದು ಕೆಲ ರೈತರ ಅಭಿಪ್ರಾಯ.
`ಎಕರೆಗೆ 7.5 ಕೆ.ಜಿ. ಕಾರ್ಬೊಪ್ಯೂರಾನ್ 3ಜಿ. ಅಥವಾ 10 ಕೆ.ಜಿ. ಫಿಪ್ರೊನಿಲ್ 0.3ಜಿ ಹರಳುಗಳನ್ನು ಗದ್ದೆಯಿಂದ ನೀರನ್ನು ಬಸಿದು ನಂತರ ಎರಚಬೇಕು. ಕನಿಷ್ಟ 36 ಗಂಟೆಗಳ ನಂತರ ನೀರನ್ನು ಗದ್ದೆಗೆ ಹರಿಯಬಿಡಬೇಕು. ಹರಳು ರೂಪದ ಕೀಟನಾಶಕಗಳನ್ನು ಉಪಯೋಗಿಸಿದಾಗ ಮೇವು ಮತ್ತು ಕಾಳನ್ನು ಬಳಕೆಗೆ ಉಪಯೋಗಿಸಬಾರದು. ಕಾರ್ಬೊಫ್ಯುರಾನ್, ಫಿಪ್ರೊನಿಲ್ ಉಪಯೋಗಿಸಿದಾಗ 30 ದಿನಗಳವರೆಗೆ ಬಳಕೆಯನ್ನು ತಡೆಯಬೇಕು’ ಎಂಬುದು ಅಧಿಕಾರಿಗಳ ಸಲಹೆ.