ಯಲ್ಲಾಪುರ: ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಸಂಚರಿಸುತ್ತಿದ್ದ ಕಾರು ಭಾನುವಾರ ಕಿರವತ್ತಿ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣ ಜಖಂ ಆಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು, ಎಲ್ಲಾ ವಾಹನಗಳು 20 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದವು. ಹುಬ್ಬಳ್ಳಿ ನವನಗರದ ಮಧುಕರ ರಾಯ್ಕರ್ ಎಂಬಾತರು ಸಹ ಕಿರವತ್ತಿ ಬಳಿ ನಿಧಾನವಾಗಿ ಕಾರು ಓಡಿಸುತ್ತಿದ್ದರು. ಆಗ ದೊಡ್ಡ ಲಾರಿಯೊಂದು ಅವರ ಕಾರಿಗೆ ಹಿಂದಿನಿoದ ಗುದ್ದಿದ್ದು, ಲಾರಿ ಗುದ್ದಿದ ರಭಸಕ್ಕೆ ಕಾರು ಮುಂದಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿದೆ. ಎರಡು ಲಾರಿಗಳ ನಡುವೆ ಸಿಲುಕಿದ ಕಾರು ಪರಸ್ಪರ ಗುದ್ದಿ ಸಂಪೂರ್ಣ ಜಖಂ ಆಗಿದೆ.
ನಾಲ್ಕು ತಿಂಗಳ ಹಿಂದೆ ಖರೀದಿಸಿದ ಕಾರು ಇದಾಗಿತ್ತು. ಈ ಕಾರಿನಲ್ಲಿ ಒಟ್ಟು 6 ಜನ ಸಂಚರಿಸುತ್ತಿದ್ದರು. ಕಾರು ಹಾಗೂ ಮುಂದಿದ್ದ ಲಾರಿ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಈ ಅಪಘಾತದಿಂದ ಯಾರಿಗೂ ಹೆಚ್ಚಿನ ಪೆಟ್ಟಾಗಿಲ್ಲ. ಗೋಕರ್ಣದ ಬಂಕಿಕೊಡ್ಲ ಮೂಲದವರಾದ ಮಧುಕರ ರಾಯ್ಕರ್ ಅವರು ಹಬ್ಬದ ನಿಮಿತ್ತ ಹುಬ್ಬಳ್ಳಿಯಿಂದ ಹೊರಟು ಊರಿಗೆ ತೆರಳುತ್ತಿದ್ದರು.
ಕಾರು ಅಪಘಾತದಿಂದ ಅವರು ತೊಂದರೆ ಅನುಭವಿಸಿದರು. ಹಬ್ಬ ಆಚರಿಸಲಾಗದೇ ಪೊಲೀಸ್ ಠಾಣೆ ತಿರುಗಾಟ ನಡೆಸಿದರು. ಕೊನೆಗೆ ರಾಜಿ ಸಂದಾನದ ಮೂಲಕ ಈ ಪ್ರಕರಣ ಬಗೆಹರಿಸಿಕೊಳ್ಳಲಾಯಿತು. ಅದಾಗಿಯೂ ಈ ಅಪಘಾತದಿಂದ ಕಾರು ಮಾಲಕರಿಗೆ ಅಂದಾಜು 4 ಲಕ್ಷ ರೂ ನಷ್ಟವಾಗಿದೆ.




