ಶಿರಸಿ: ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಚಾರಣೆ ನೋಟಿಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾದರೆ ಅಲ್ಲಿ ವಿಚಾರಣೆ ನಡೆಸುವ ಅಧಿಕಾರಿಗಳೇ ಇರಲಿಲ್ಲ. ಇದರಿಂದ ಅರಣ್ಯ ಅತಿಕ್ರಮಣದಾರರು ಅನಗತ್ಯ ತೊಂದರೆ ಅನುಭವಿಸಿದರು.
ರಾಜ್ಯದ ಎಲ್ಲಡೆ ಅರಣ್ಯ ಅತಿಕ್ರಮಣ ನಡೆಸಿದವರನ್ನು ಒಕ್ಕಲೆಬ್ಬಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ್ದು, ನಂತರ ಜಿಪಿಎಸ್ ಆದವರ ಒತ್ತುವರಿ ತೆರವು ಮಾಡದಂತೆ ಸೂಚನೆ ನೀಡಿದ್ದರು. ಇದೀಗ ಯಾವ ಅರಣ್ಯ ಅತಿಕ್ರಮಣದಾರರು ಜಿಪಿಎಸ್ ಮಾಡಿಸಿಕೊಂಡಿದ್ದಾರೆ? ಯಾರು ಮಾಡಿಸಿಕೊಂಡಿಲ್ಲ? ಎನ್ನುವುದರ ಬಗ್ಗೆ ವಿಚಾರಣೆ ಶುರುವಾಗಿದೆ. ಈ ಭಾನುವಾರ ರಾತ್ರಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ರಾತ್ರಿ ದೊರೆತ ನೋಟಿಸ್’ನಿಂದ ಭಯಗೊಂಡ ಅತಿಕ್ರಮಣದಾರರು ಬೆಳಗ್ಗೆ ಸಮಯಕ್ಕೆ ಸರಿಯಾಗಿ ಅರಣ್ಯ ಇಲಾಖೆಗೆ ಕಚೇರಿಗೆ ಹಾಜರಾದರೇ ಅಲ್ಲಿ ವಿಚಾರಣೆ ನಡೆಸುವವರೇ ಇರಲಿಲ್ಲ!
ಸಮಯಕ್ಕೆ ಸರಿಯಾಗಿ ಅತಿಕ್ರಮಣದಾರರು ಹಾಜರಾದರೂ ಅಧಿಕಾರಿಗಳು ಬಾರದ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಮೊನ್ನೆ ಸಹ ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಕರೆದು ವಿಚಾರಣಾ ಅಧಿಕಾರಿಗಳು ಸಂಜೆ 5 ಗಂಟೆಗೆ ಹಾಜರಾಗಿದ್ದನ್ನು ಅವರು ಸ್ಮರಿಸಿದರು. `ಅಧಿಕಾರಿಗಳು ಸರಿಯಾಗಿ ಸಮಯ ಪಾಲನೆ ಮಾಡದ ಕಾರಣ ಅರಣ್ಯ ಇಲಾಖೆ ಕಚೇರಿ ಮುಂದೆ ಅತಿಕ್ರಮಣದಾರರು ಅನಗತ್ಯವಾಗಿ ಕಾಯಬೇಕಿದೆ’ ಎಂದು ರವೀಂದ್ರ ನಾಯ್ಕ ವಿವರಿಸಿದರು.
ಸೋಮವಾರ ಅಂತೂ ಮುಕ್ಕಾಲು ಗಂಟೆ ತಡವಾಗಿ ಬಂದ ಅಧಿಕಾರಿಗಳು ವಿಚಾರಣೆ ನಡೆಸಿದರು. ಅಸಮರ್ಪಕ ಮತ್ತು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವ ಬಗ್ಗೆ ವಿಚಾರಣೆ ನಡೆಸಿದನ್ನು ಸಹ ರವೀಂದ್ರ ನಾಯ್ಕ ಖಂಡಿಸಿದರು. ಅತಿಕ್ರಮಣದಾರರಿಗೆ ಅರ್ಥವಾಗದ ಭಾಷೆಯಲ್ಲಿ ನೋಟಿಸ್ ನೀಡಿರುವುದು, ವಿಚಾರಣೆಗೆ ಸಂಬoಧಿಸಿದ ಪ್ರಮುಖ ಅಂಶಗಳನ್ನು ನೋಟಿಸಿನಲ್ಲಿ ಬರೆಯದಿರುವುದು ಹಾಗೂ ಕಾನೂನಿನಲ್ಲಿ ಅವಕಾಶವಿಲ್ಲದ ವ್ಯಕ್ತಿಯು ಪ್ರಕರಣ ದಾಖಲಿಸಿರುವುದು ಪ್ರಮುಖ ನ್ಯೂನ್ಯತೆಗಳಾಗಿ ಕಂಡು ಬಂದಿದ್ದು, ಈ ಎಲ್ಲಾ ಅಂಶಗಳ ಬಗ್ಗೆ ರವೀಂದ್ರ ನಾಯ್ಕ ಗಮನ ಸೆಳೆದರು.
`ಒಕ್ಕಲೇಬ್ಬಿಸುವ ವಿಚಾರಣೆ ಮತ್ತು ಅತಿಕ್ರಮಣದಾರರ ಮೇಲೆ ದಾಖಲಾದ ಪ್ರಕರಣಾ ಅರಣ್ಯ ಅತಿಕ್ರಮಣದಾರರ ಮೇಲೆ ದಾಖಲಿಸುವ ಸಂದoರ್ಭದಲ್ಲಿ ಅರಣ್ಯ ಅಧಿಕಾರಿಗಳು ಕನಿಷ್ಠ ಕಾನೂನು ಪಾಲನೆಯನ್ನು ಸಹ ಮಾಡಿಲ್ಲ’ ಎಂದವರು ಆಕ್ಷೇಪ ವ್ಯಕ್ತಪಡಿಸಿದರು.




