ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಗೊಂಬೆಗಳು ಪಾಠ ಮಾಡುತ್ತವೆ!
ನ್ಯೂಟನ್ ಚಲನೆಯ ನಿಯಮ, ಜಾಗತಿಕ ತಾಪಮಾನದ ಬಗ್ಗೆ ಬೊಂಬೆ ಹೇಳುವ ಮಾತುಗಳು ಮಕ್ಕಳ ಮನದಾಳದಲ್ಲಿ ನಾಟಿವೆ. ಇಲ್ಲಿನ ವಿಜ್ಞಾನ ಶಿಕ್ಷಕ ಸಿದ್ದು ಬಿರಾದಾರ ಬೊಂಬೆ ಆಡಿಸುವುದರಲ್ಲಿ ಎತ್ತಿದ ಕೈ. ಅವರ ಕೈಬೆರಳ ತುದಿಯಲ್ಲಿ ಆಡುವ ಗೊಂಬೆಗಳಿoದ ಅವರು ಪಾಠ ಮಾಡತ್ತಾರೆ. ಇದು ಮಕ್ಕಳ ಮೇಲೆ ಅಗಾದವಾದ ಪರಿಣಾಮ ಬೀರಿದ್ದು, ಒಮ್ಮೆ ಮಾಡಿದ ಪಾಠ ಎಂದಿಗೂ ಮರೆಯುವುದಿಲ್ಲ.
ಪಠ್ಯದ ಆಚೆಯ ವೈಜ್ಞಾನಿಕ ಸಂಗತಿಗಳನ್ನು ಗೊಂಬೆಯಾಟದ ಮೂಲಕ ಅವರು ಹೇಳಿಕೊಡುತ್ತಾರೆ. 35ಕ್ಕೂ ಅಧಿಕ ವಿಜ್ಞಾನ ರೂಪಕ ರಚಿಸಿ ಅದನ್ನು ಅವರು ಪಾಠದ ಮೂಲಕ ತೋರಿಸಿದ್ದಾರೆ. ಈ ವೈಜ್ಞಾನಿಕ ಸಂಗತಿಗಳ ಬಗ್ಗೆ ಅವರು ದೇಶದ ನಾನಾ ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳಿಗೂ ಗೊಂಬೆ ತಯಾರಿಕೆ, ಗೊಂಬೆಯಾಟದ ತರಬೇತಿ ನೀಡುತ್ತಾರೆ. ಇದರ ಪರಿಣಾಮ ಅವರ ಹಳೆಯ ವಿದ್ಯಾರ್ಥಿಗಳು ಸಹ ಬೊಂಬೆ ಆಡಿಸುತ್ತಾರೆ!
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಮುದ್ದಾಪುರ ಮೂಲದ ಅವರು 13 ವರ್ಷಗಳಿಂದ ಹಳಿಯಾಳದ ಹಳ್ಳಿಯಲ್ಲಿ ಪಾಠ ಮಾಡುತ್ತಿದ್ದಾರೆ.