ಕುಮಟಾ: 65 ವರ್ಷದ ಲೀಲಾವತಿ ಅವರು ತಮಗೆ ಮಂಜೂರಿ ಆದ `ವಿಧವಾ ವೇತನ ಬೇಡ’ ಎಂದು ಕಳೆದ 5 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಅವರ ಅರ್ಜಿಗೆ ಹಿಂಬರಹ ದೊರೆತಿಲ್ಲ.
ಜನತಾ ಫ್ಲೋಟ್ ಮಸೂರ್ ಕ್ರಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನಾಗಪ್ಪ ನಾಯ್ಕ ಅವರನ್ನು ಲೀಲಾವತಿ ಮದುವೆ ಆಗಿದ್ದರು. 30 ವರ್ಷಗಳ ಹಿಂದೆ ಅವರು ಸಾವನಪ್ಪಿದ್ದು, ಆ ಅವಧಿಯಲ್ಲಿ ಸರ್ಕಾರ ವಿಧವಾ ವೇತನ ಎಂದು ಪ್ರತಿ ತಿಂಗಳು 50 ರೂ ನೀಡುತ್ತಿತ್ತು. ಕ್ರಮೇಣ ಅದು ಏರಿಕೆಯಾಗಿ ಇದೀಗ ಅವರಿಗೆ ಪ್ರತಿ ತಿಂಗಳು 800ರೂ ವಿಧವಾ ವೇತನ ದೊರೆಯುತ್ತಿದೆ. ಆದರೆ, 65 ವರ್ಷ ಪೂರೈಸಿದ ಹಿನ್ನಲೆ ಅವರು ಪ್ರತಿ ತಿಂಗಳು 1200ರೂ ಸಿಗುವ `ಸಂಧ್ಯಾ ಸುರಕ್ಷಾ’ ಯೋಜನೆಗೆ ಅರ್ಜಿ ಹಾಕುವುದಕ್ಕಾಗಿ ಅಲೆದಾಡುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ ಸಿಗಬೇಕು ಎಂದರೆ ಮೊದಲು ಬರುತ್ತಿದ್ದ ವಿಧವಾ ವೇತನ ಸ್ಥಗಿತವಾಗಬೇಕು. ವಿಧವಾ ವೇತನ ಪಡೆಯುತ್ತಿದ್ದವರು ಸಂಧ್ಯಾ ಸುರಕ್ಷಾ ಅಡಿ ಅರ್ಜಿ ಹಾಕುವ ಹಾಗಿಲ್ಲ. ಹೀಗಾಗಿ ಅವರು ವಿಧವಾ ವೇತನ ನಿಲ್ಲಿಸುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ, ಅಲೆದಾಡುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳನ್ನು ಬೆಂಗಳೂರಿಗೆ ಹೋಗಿ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ.
ಇದರಿಂದ ನೊಂದ ಅವರು ಜನ ಸಾಮಾನ್ಯರ ಸಮಾಜ ಕೇಂದ್ರಕ್ಕೆ ತೆರಳಿ ತಮ್ಮ ಸಮಸ್ಯೆ ವಿವರಿಸಿದರು. ಆಗ ಆಗ್ನೇಲ್ ರೋಡ್ರಿಗ್ರಿಸ್ ಅವರು ಕುಮಟಾ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಫೋನ್ ಮಾಡಿ ಸಮಸ್ಯೆ ವಿವರಿಸಿದ್ದು, ಇದಾದ ನಂತರ ಸುಧಾಕರ ನಾಯ್ಕ ಅವರೊಂದಿಗೆ ಲೀಲಾವತಿ ಅವರು ಕಚೇರಿಗೆ ತೆರಳಿದರು. ಅಲ್ಲಿದ್ದವರನ್ನು ತರಾಠೆಗೆ ತೆಗೆದುಕೊಂಡ ವಿಭಾಗಾಧಿಕಾರಿ ಕಲ್ಯಾಣಿ `1 ವಾರದ ಒಳಗೆ ಅವರ ಸಮಸ್ಯೆ ಬಗೆಹರಿಸಿ’ ಎಂದು ಸೂಚಿಸಿದರು.
ನೆಮ್ಮದಿ ಕೇಂದ್ರದಲ್ಲಿ ಇಲ್ಲ ನೆಮ್ಮದಿ:
ಯಲ್ಲಾಪುರದ ನೆಮ್ಮದಿ ಕೇಂದ್ರದಲ್ಲಿಯೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಚಂದ್ಗುಳಿ ಗ್ರಾ ಪಂ ಸದಸ್ಯ ಸುಬ್ಬಣ್ಣ ಉದಾಬೈಲ್ ದೂರಿದ್ದಾರೆ. ಈ ಕುರಿತು ಫೋಟೋ ಮಾಹಿತಿ ಹಂಚಿಕೊ0ಡ ಅವರು ಪಹಣಿ ಸೇರಿದಂತೆ ವಿವಿಧ ದಾಖಲೆ ಪಡೆಯಲು ನೆಮ್ಮದಿ ಕೇಂದ್ರಕ್ಕೆ ತೆರಳಿದರೆ ಅಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗಿದೆ’ ಎಂದು ದೂರಿ ಜಿಪಿಎಸ್ ಆಧಾರಿತ ಫೋಟೋ ರವಾನಿಸಿದ್ದಾರೆ.