ಯಲ್ಲಾಪುರ: ಕದಂಬರ ಆಳ್ವಿಕೆಯಲ್ಲಿ ಸ್ಥಾಪಿತವಾದ ಈಶ್ವರ ದೇವಸ್ಥಾನದಲ್ಲಿ ವಾಮಾಚಾರ ನಡೆದಿದೆ. ದೇವಾಲಯದ ಎಲ್ಲಾ ಬಾಗಿಲು ಹಾಕಿದ್ದರೂ ಮೇಲ್ಚಾವಣಿ ಒಡೆದು ಒಳನುಗ್ಗಿದ ದುಷ್ಕರ್ಮಿಗಳು ವಾಮಾಚಾರದ ಪ್ರಯೋಗ ಮಾಡಿದ್ದಾರೆ.
ಕಲ್ಮಠಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ ಈಶ್ವರ ಗಲ್ಲಿಯಲ್ಲಿ ಅನಾಧಿಕಾಲದಿಂದಲೂ ಈಶ್ವರ ದೇವಾಲಯವಿದೆ. ಉಳುವಿಗೆ ಹೊರಟಿದ್ದ ಬಸವಣ್ಣವನರು ಸಹ ಈ ದೇವಾಲಯಕ್ಕೆ ಆಗಮಿಸಿ ಅಭಿಷೇಕ ಸೇವೆ ಮಾಡಿದ್ದರು ಎಂಬ ಮಾತು ಈ ದೇಗುಲಕ್ಕಿದೆ. ಆದರೆ, ಈ ಅನ್ಯರ ದಬ್ಬಾಳಿಕೆಯಿಂದ ಇಲ್ಲಿನ ಈಶ್ವರ ಲಿಂಗ, ನಾಗರ ಕಲ್ಲು ಹಾಗೂ ನಂದಿ ಮೂರ್ತಿ ಭಿನ್ನವಾಗಿದ್ದು, ಅದೆಲ್ಲವನ್ನು ನೂತನವಾಗಿ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಕಿಡಿಗೇಡಿಗಳು ಪದೇ ಪದೇ ವಿಕೃತಿ ಮೆರೆಯುತ್ತಿರುವುದು ಆಡಳಿತ ಮಂಡಳಿಯವರ ತಲೆನೋವಿಗೆ ಕಾರಣವಾಗಿದೆ.
`ದಾಖಲೆಗಳ ಪ್ರಕಾರ ದೇವಾಲಯಕ್ಕೆ 4.5 ಗುಂಟೆ ಭೂಮಿ ಇದ್ದು ಕೆಲವು ಅತಿಕ್ರಮಣವಾಗಿದೆ. ಅದನ್ನು ದೇವಾಲಯಕ್ಕೆ ಬಿಟ್ಟುಕೊಡಿ ಎಂದು ಕೇಳಿರುವುದೇ ಸಮಸ್ಯೆಗೆ ಮೂಲ ಕಾರಣ’ ಎಂದು ದೇವಾಲಯ ಸಮಿತಿಯ ಕೃಷ್ಣಾನಂದ ದೇವನಳ್ಳಿ ಹಾಗೂ ಶಿವು ಕವಳಿ ಸುದ್ದಿಗಾರರಿಗೆ ವಿವರಿಸಿದರು. `ಕಿಡಿಗೇಡಿಗಳ ಪತ್ತೆಗಾಗಿ ಪ್ರಸ್ತುತ ಸಿಸಿ ಟಿವಿ ಅಳವಡಿಸಲಾಗಿದೆ. ಈ ಹಿಂದೆ ಸಹ ಸಾಕಷ್ಟು ಬಾರಿ ವಿವಿಧ ವಿಕೃತ ಪ್ರಯೋಗಗಳು ಇಲ್ಲಿ ನಡೆದಿದ್ದು, ಜ್ಯೋತಿಷ್ಯರ ಸಲಹೆ ಪ್ರಕಾರ ದೋಷ ನಿವಾರಣೆಗಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದವರು ವಿವರಿಸಿದರು. `ಪ್ರಸ್ತುತ ದೇವಾಲಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ’ ಎಂದು ಪ್ರಮುಖರಾದ ಸಂತೋಷ ಗುಡಿಗಾರ, ಸುಧೀರ ಕೋಡ್ಕಣಿ, ಶ್ರೀಪಾದ ಭಟ್ಟ ಮನವಿ ಮಾಡಿದರು.
ಈ ವೇಳೆ ಸ್ಥಳಕ್ಕೆ ಬಂದ ಆ ಭಾಗದ ಕೆಲ ಜನ `ದೇವಾಲಯ ಕಮಿಟಿಯವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂಬ ನಿಟ್ಟಿನಲ್ಲಿ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು. ವಾಮಾಚಾರ ನಡೆಸಿದ ಆರೋಪವನ್ನು ಕಮಿಟಿ ಸದಸ್ಯರು ತಮ್ಮ ಮೇಲೆ ಹೋರಿಸಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ `ಎಲ್ಲವನ್ನು ದೇವರು ನೋಡುತ್ತಿದ್ದಾನೆ. ನಮ್ಮ ಪ್ರಾಮಾಣಿಕತೆ ದೇವರಿಗೆ ಗೊತ್ತಿದೆ’ ಎನ್ನುತ್ತ ಎರಡು ಬಣದವರು ಮನೆಗೆ ತೆರಳಿದರು.
ದೇವಾಲಯದಲ್ಲಿ ನಡೆದ ವಾಗ್ವಾದದ ವಿಡಿಯೋ ಇಲ್ಲಿ ನೋಡಿ..



