ಕಾರವಾರ: `ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ಕಾರವಾರದ ಎಲ್ಲಡೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಜನ ಜಾಗೃತಿಗಾಗಿ ಹಲವು ಸ್ವಯಂ ಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ವರ್ಣಚಿತ್ರಗಳು ಸುತ್ತಮುತ್ತಲಿನ ಬಣ್ಣ ಮತ್ತು ಆಕರ್ಷಣೆಯಿಂದ ಕೂಡಿದ್ದು, ಸ್ವಚ್ಛತೆ – ನೈರ್ಮಲ್ಯ ಮತ್ತು ಕಸ-ಮುಕ್ತ ಪರಿಸರ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾರುತ್ತಿವೆ.
ಶಾಲೆಗಳು, ಸಮುದಾಯ ಕೇಂದ್ರಗಳು ಮತ್ತು ಮಾರುಕಟ್ಟೆ ಸ್ಥಳಗಳಂತಹ ವಿವಿಧ ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲೆ ಈ ಚಿತ್ರ ರಚಿಸಲಾಗಿದೆ. `ಸ್ವಚ್ಛತಾ ಹಿ ಸೇವಾ ಅಭಿಯಾನ’ವು ಅಕ್ಟೋಬರ್ 2ರವರೆಗೆ ನಡೆಯಲಿದೆ. ಸ್ವಯಂ ಸೇವಕರಾದ ರಾಮನಾಥ್ ತಾಂಡೇಲ್, ರಕ್ಷಿತಾ ನಾಯ್ಕ್, ಸಂಸ್ಕೃತಿ ಬಾಬ್ರೇಕರ್, ಅಕ್ಷಯ್ ನಾಯಕ್, ವಿಶಾಲ್ ಸಹಾನಿ, ಸಾಕ್ಷತಾ ನಾಯ್ಕ್, ಸ್ಮಿತೇಶ್ ಓಟವನೇಕರ್, ಶ್ರೇಯಾ ಶೇಟ್, ಕಾಶಿಶ್ ನಾಯ್ಕ್, ಅಥರ್ವ ಚಿಪ್ಕರ್, ಯಶ್ ಪಟೇಲ್, ಎಸ್ ಹರೀಶ್, ಸುಹಾನ್ಯ ಗೋಡೆ ಚಿತ್ರಕಲೆಯಲ್ಲಿ ಭಾಗವಹಿಸಿದ್ದಾರೆ.
ಬ್ಯಾಂಕಿನ ವಿರುದ್ಧ ಹೋರಾಡಿ ಗೆದ್ದ ರೈತ
ಹೊನ್ನಾವರ: ಸಾಲ ನೀಡುವಾಗ ಖಾಲಿ ಚೆಕ್’ಗೆ ಸಹಿ ಪಡೆದು ರೈತನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸಿದ ಹಡಿನಬಾಳ ಕಡಗೇರಿಯ ಸುಬ್ರಾಯ ಹೊನ್ನಪ್ಪ ನಾಯ್ಕ ಅವರಿಗೆ ಗೆಲುವು ಸಿಕ್ಕಿದೆ.
ಹಡಿನಬಾಳ ಕಡಗೇರಿಯ ಸುಬ್ರಾಯ ಹೊನ್ನಪ್ಪ ನಾಯ್ಕ ಪಿಎಲ್‌ಡಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಸಾಲ ಪಡೆಯುವಾಗ ಬ್ಯಾಂಕಿನವರು ದಾಖಲೆಗಳ ಜೊತೆ ಭದ್ರತೆ ನೆಪದಲ್ಲಿ ಖಾಲಿ ಚೆಕ್’ಗೆ ಸಹಿ ಪಡೆದಿದ್ದರು. ನಂತರ ಆ ಚೆಕ್ ದುರುಪಯೋಗಪಡಿಸಿಕೊಂಡು ರೈತನ ವಿರುದ್ಧ ದೂರು ದಾಖಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಸುಬ್ರಾಯ ನಾಯ್ಕ ನಿರಪರಾಧಿ ಎಂದು ಆದೇಶಿಸಿದೆ. `ರೈತರಿಗೆ ಕೃಷಿ ಕ್ಷೇತ್ರಕ್ಕೆ ಸಹಾಯಕ್ಕೆ ಇರುವ ಬ್ಯಾಂಕ್ ರೈತರಿಗೆ ಸಮಸ್ಯೆ ನೀಡುವುದು ಸರಿಯಲ್ಲ’ ಎಂದು ನ್ಯಾಯವಾದಿ ವಿಕ್ರಮ್ ನಾಯ್ಕ ಹೇಳಿದ್ದಾರೆ.
ಪೌಷ್ಠಿಕ ಆಹಾರ ತಯಾರಿಕರಿಗೆ ಮಾರುಕಟ್ಟೆ ವ್ಯವಸ್ಥೆ

ಕಾರವಾರ: `ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳಿಂದ ತಯಾರಿಸುವ ಪೌಷ್ಠಿಕ ಆಹಾರ ಹಾಗೂ ಪಾನೀಯ ತಯಾರಿಕೆಗೆ ಉತ್ತೇಜನ ನೀಡಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜನ್ಸಿಯ ಅಧ್ಯಕ್ಷ ಸತೀಶ್ ಸೈಲ್ ಹೇಳಿದರು.
ಶನಿವಾರ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು `ಗರ್ಭಿಣಿ ಹಾಗೂ ಮಗುವಿನ ಪರಿಪೂರ್ಣ ಆರೋಗ್ಯಕ್ಕಾಗಿ ಮತ್ತು ಅಪೌಷ್ಠಿಕತೆಯನ್ನು ನಿವಾರಿಸಲು ಪೌಷ್ಠಿಕ ಆಹಾರ ಸೇವನೆ ಅಗತ್ಯ. ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳಿಂದ ಮನೆಗಳಲ್ಲಿಯೇ ಪೌಷ್ಠಿಕ ಆಹಾರ ಸಿದ್ದಪಡಿಸಬಹುದಾಗಿದೆ. ಮಹಿಳೆಯರು ಅನೇಕ ಬಗೆಯ ಪೌಷ್ಠಿಕ ಆಹಾರ ಸಿದ್ದಪಡಿಸುವುದರಲ್ಲಿ ನಿಪುಣರಾಗಿದ್ದು, ಇಂತಹ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಮಾರಾಟ ಮಾಡಲು ಬಯಸಿದ್ದಲ್ಲಿ ಅವರಿಗೆ ಸ್ಥಳಾವಕಾಶ ಸೇರಿದಂತೆ ಎಲ್ಲಾ ರೀತಿಯ ಅನುಮತಿ ಹಾಗೂ ಸಹಕಾರ ನೀಡಲಾಗುವುದು’ ಎಂದರು.
ಕುಮಟಾದಲ್ಲಿ ಅರಣ್ಯವಾಸಿಗಳ ಸಭೆ
ಕುಮಟಾ: ತಾಲೂಕಿನ ಅರಣ್ಯವಾಸಿಗಳ ಸಮಸ್ಯೆಗಳ ಚರ್ಚಿಸುವ ಕುರಿತು ಸೆ 24 ಮಂಗಳವಾರ ಮುಂಜಾನೆ 10.30ಕ್ಕೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಕಛೇರಿಯಲ್ಲಿ ಹಿರಿಯ ಅಧಿಕಾರಿಯೊಂದಿಗೆ ಸಮಾಲೋಚನಾ ಸಭೆ ನಡೆಯಲಿದೆ.
ಕುಮಟಾದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಸಂಬoಧಿಸಿ ಅರಣ್ಯ ಸಿಬ್ಬಂದಿ ವ್ಯತಿರಿಕ್ತವಾಗಿ ಕಾರ್ಯ ಜರಗುಗಿಸುತ್ತಿರುವುದರಿಂದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಈ ಸಭೆ ಆಯೋಜಿಸಿರುವುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕಡಲತೀರ ಸ್ವಚ್ಛಗೊಳಿಸಿದ ಅಧಿಕಾರಿಗಳು

ಕಡಲತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಕಾರವಾರದ ಕಡಲತೀರದಲ್ಲಿ ತಟರಕ್ಷಕ ಪಡೆಯವರು ಸ್ವಚ್ಛತಾ ಕಾರ್ಯ ನಡೆಸಿದರು. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಇತರರು ಭಾಗವಹಿಸಿದ್ದರು.
ದಸರಾ ಕ್ರೀಡಾಕೂಟ: ಪೊಲೀಸರಿಗೆ ಇಲ್ಲ ಅವಕಾಶ!
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಪ್ಟೆಂಬರ್ 25 ಮತ್ತು 26ರಂದು ಆಯೋಜಿಲಾಗಿದೆ.
ಸೆ.25 ರಂದು ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಲ್ ಬ್ಯಾಡ್ಮಿಂಟನ್, ಹಾಕಿ, ಖೋ-ಖೋ, ಥ್ರೋಬಾಲ್, ಕಬ್ಬಡ್ಡಿ, ಡಾನ್ ಬಾಸ್ಕೋ ಹೈಸ್ಕೂಲ್ ನಲ್ಲಿ ಬಾಸ್ಕೆಟ್ ಬಾಲ್, ಯಲ್ಲಾಪುರ ನಾಕಾ ಬಳಿಯ ಅರಣ್ಯ ಸಮುದಾಯ ಭವನದಲ್ಲಿ ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಯಲ್ಲಾಪುರ ರೋಡ್ ಬಳಿಯ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಭವನದಲ್ಲಿ ಯೋಗ ಕ್ರೀಡೆಗಳು ನಡೆಯಲಿವೆ. ಇದರಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಕಿರಣ ನಾಯ್ಕ 9449801404ನ್ನು ಸಂಪರ್ಕಿಸಬಹುದು.
ಸೆ. 25ರಂದು ಹಳಿಯಾಳದ ಕುಸ್ತಿ ಅಖಾಡದಲ್ಲಿ ಕುಸ್ತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ತುಕಾರಾಮ ಗೌಡ 9945489193 ಸಂಪರ್ಕಿಸಬಹುದು. ಇನ್ನೂ ಅದೇ ದಿನ ಭಟ್ಕಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಪುಟ್ಬಾಲ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ನಾಗರಾಜ ಪಟಗಾರ 9448995841ರನ್ನು ಸಂಪರ್ಕಿಸಬಹುದು. ಸೆ.26 ರಂದು ಕುಮಟಾ ತಾಲೂಕಿನ ಮಿರ್ಜಾನ ಬಿಜಿಎಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಬಾಲಕೃಷ್ಣ ನಾಯ್ಕ 8884657968 ಮತ್ತು ಶಾನೂರಲಿ ಖತಾಲ್ 9590918322ರನ್ನು ಸಂಪರ್ಕಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇರವಾಗಿ ಆಯ್ಕೆ ಮಾಡುವ ಟೆನ್ನಿಸ್, ನೆಟ್‌ಬಾಲ್ ಮತ್ತು ಈಜು ಸ್ಪರ್ಧೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಕಿರಣ ನಾಯ್ಕ 9449801404ರನ್ನು ಸಂಪರ್ಕಿಸಬಹುದು.
ಈ ಕ್ರೀಡಾಕೂಟದಲ್ಲಿ ಪೊಲೀಸರು ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಭಾಗವಹಿಸುವ ಹಾಗಿಲ್ಲ. ಅದಾಗಿಯೂ ಭಾಗವಹಿಸಿದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಯುವಜನ ಸೇವಾ ಕ್ರೀಡಾ ಇಲಾಖೆ ಎಚ್ಚರಿಸಿದೆ. ರಕ್ಷಣಾಪಡೆ, ಆರರಕ್ಷಣಾಪಡೆ ಸೇರಿದ ಯಾವುದೇ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅಂತಹ ಪ್ರಕರಣ ಗಮನಕ್ಕೆ ಬಂದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೇಲ್ಕಾಣಿಸಿದ ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಅದೇ ದಿನ ಬೆಳಗ್ಗೆ 9 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರ ಫೋನ್ ನಂ 9480886551.




