ಯಕ್ಷಗಾನ ಕ್ಷೇತ್ರದಲ್ಲಿ 45ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿದ ಸಿದ್ದಾಪುರದ ಅಶೋಕ ಭಟ್ಟರು ಯಾವ ಪಾತ್ರ ಮಾಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಸಾಮಾನ್ಯವಾಗಿ ಮಾಡುವ ನಾಯಕ ಪಾತ್ರದ ಜೊತೆ ಖಳನಾಯಕ, ಕಟ್ಟು ವೇಷ, ಮಹಿಳಾ ಪಾತ್ರದಾರಿ ಹಾಗೂ ಹಾಸ್ಯ ಕಲಾವಿದರಾಗಿ ಸಹ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ.
ತಮ್ಮ ಇಳಿ ವಯಸ್ಸಿನಲ್ಲಿ ಸಹ ಅವರು ತಮ್ಮ ಬಾಲ್ಯದ ದಿನದಲ್ಲಿನ ಹುಮ್ಮಸ್ಸಿನಲ್ಲಿಯೇ ಕುಣಿಯುತ್ತಾರೆ. ಯಕ್ಷಗಾನದಲ್ಲಿ ಎಷ್ಟು ಪಾತ್ರ ಬರುತ್ತದೋ ಆ ಎಲ್ಲಾ ಪಾತ್ರವನ್ನು ನಿಭಾಯಿಸಬಲ್ಲ ಕಲಾವಿದರಾಗಿ ಅಶೋಕ ಭಟ್ಟರು ಗುರುತಿಸಿಕೊಂಡಿದ್ದಾರೆ.
ಯಕ್ಷಗಾನ ಆರಾಧಕರ ಊರಾದ ಕೊಳಗಿ ಶಿರಳಗಿ ಭಾಗ ಪ್ರದೇಶದ ಹೊನ್ನೆಗುಂಡಿಯ ಅಶೋಕ ಭಟ್ಟರಿಗೆ ಕೊಳಗಿ – ಶಿರಳಗಿ – ಹಣಜೀಬೈಲು, ಮೂಗೂರು ಭಾಗದ ನಂಟು ಜಾಸ್ತಿ. ಹೀಗಾಗಿ ಯಕ್ಷಗಾನದಲ್ಲಿನ ಆಸಕ್ತಿ ಬಾಲ್ಯದಲ್ಲಿಯೇ ಬೆಳೆದಿತ್ತು. ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದ ಅವರು ಹೆರಂಜಾಲು ವೆಂಕಟ್ರಮಣಯ್ಯ, ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರು ಮೊದಲಾದವರ ಬಳಿ ಕಲಿತರು. ನಂತರ ಕೆರೆಮನೆ ಇಡಗುಂಜಿ ಮೇಳದಲ್ಲಿ ಕುಣಿಯಲು ಶುರು ಮಾಡಿದರು.
ಕಲಾವಿದರು ಬಾರದೇ ಇದ್ದಾಗ ಒಂದೇ ಯಕ್ಷಗಾನದಲ್ಲಿ 13 ಪಾತ್ರ ನಿಭಾಯಿಸಿದ ಹಿರಿಮೆ ಅಶೋಕ ಭಟ್ಟರದ್ದು. ಅವರು ಚಕ್ರವ್ಯೂಹದ ಅಭಿಮನ್ಯು, ಕಂಸವಧೆ ಕೃಷ್ಣ, ಧರ್ಮಾ0ಗದ, ಸುಧನ್ನ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಯಕ್ಷಗಾನದ ಬಹುವಿಕ್ರಮ ಅಶೋಕ ಭಟ್ಟ ಸಿದ್ದಾಪುರ (ಲೋಕಧ್ವನಿ)