ಹೊನ್ನಾವರ: ಶರಾವತಿ ನದಿ ನೀರನ್ನು ಬೇರೆ ಊರುಗಳಿಗೆ ಹರಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಇದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ನಿರ್ಣಯಿಸಲಾಗಿದೆ. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಈ ಹೋರಾಟದ ರೂವಾರಿಯಾಗಿದ್ದಾರೆ.
ಭಾನುವಾರ ಹೊಸನಗರದ ಮೂಲೆಗದ್ದೆ ಮಠದಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟದ ಸಭೆಯಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯ ಕೇಳಿಬಂದಿದೆ. `ಶರಾವತಿ ನದಿ ನೀರನ್ನು ಯಾವುದೇ ಕಾರಣಕ್ಕೂ ಬೇರೆ ಕಡೆ ಪೂರೈಸಲು ಬಿಡಲ್ಲ’ ಎಂದು ಹೊನ್ನಾವರದ ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಈ ಸಭೆಯಲ್ಲಿ ಹೇಳಿದ್ದಾರೆ. `ಶರಾವತಿ ನದಿಗೆ ಸಮುದ್ರದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು ಸಿಹಿ ನೀರು ಉಪ್ಪು ನೀರಾಗಿ ಪರಿವರ್ತನೆಯಾಗುತ್ತಿದೆ. ನದಿ ತಿರುವು ಯೋಜನೆ ಜಾರಿಯಾದರೆ ಶರಾವತಿ ಅಸ್ತಿತ್ವಕ್ಕೆ ಕಂಟಕ ಎದುರಾಗಲಿದೆ. ಈ ಭಾಗದ ಜನರ ಬದುಕು ಸಹ ನುಚ್ಚು ನೂರಾಗಲಿದೆ’ ಎಂದವರು ಆತಂಕ ವ್ಯಕ್ತಪಡಿಸಿದರು. `ಶರಾವತಿ ನದಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಭೂಮಿಯ ಹಕ್ಕು ದೊರಕಿಲ್ಲ. ಈಗ ಅರಣ್ಯ ಇಲಾಖೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡುತ್ತಿದ್ದಾರೆ’ ಎಂದವರು ಪರಿಸ್ಥಿತಿಯ ಬಗ್ಗೆ ವಿವರಿಸಿದರು. `ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಭಾಗಗಳಿಗೆ ಶರಾವತಿ ನದಿ ನೀರು ಹರಿಸಲು ಸ್ಥಳೀಯರ ವಿರೋಧವಿದೆ. ಹೀಗಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡಬೇಕು’ ಎಂದವರು ಆಗ್ರಹಿಸಿದರು.
`ಗುರುತ್ವಾಕರ್ಷಣೆ ಸಿದ್ಧಾಂತಕ್ಕೆ ವಿರುದ್ಧವಾಗಿ ನದಿ ತಿರುವು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸಲು ಮುಂದಾಗಿದೆ. ಇದರಿಂದ ಶರಾವತಿ ಕಣಿವೆ ಅಭಯಾರಣ್ಯ ಪ್ರದೇಶದ ಕೇಂದ್ರ ಸ್ಥಾನಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಪರಿಸರ ತಜ್ಞ ಅಖಿಲೇಶ್ ಚಿಪ್ಪಳಿ ಈ ಸಭೆಯಲ್ಲಿ ಹೇಳಿದರು. `2017ರಲ್ಲಿ ನದಿ ತಿರುವು ಯೋಜನೆ ರೂಪಿಸಿದಾಗ ಅದರ ವೆಚ್ಚ 4 ಸಾವಿರ ರೂ ಕೋಟಿ ಆಗಿದ್ದು, ಇದೀಗ 8 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಪರಿಸರ ನಾಶದ ಪರಿಣಾಮ ಸಾಕಷ್ಟು ದುರಂತ ನಡೆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ’ ಎಂದು ಸಭೆಯಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು. `ಯೋಜನೆಯ ಸಾಧಕ ಬಾಧಕಗಳ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗಬೇಕು’ ಎಂದು ಒತ್ತಾಯಿಸಿದರು. ಮುಂದುವರೆದ ದೇಶಗಳಲ್ಲಿ ಬದಲಿ ಇಂಧನಗಳ ಮೊರೆ ಹೋಗುತ್ತಿದ್ದುಮ ಇಲ್ಲಿ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಮೂರ್ಖತನದ ಪರಮಾವಧಿ’ ಎಂದು ಇಂಧನ ತಜ್ಞ ಶಂಕರ ಶರ್ಮ ಅಭಿಪ್ರಾಯ ಹಂಚಿಕೊoಡರು.
`ಎಲ್ಲಾ ಧರ್ಮ, ಜಾತಿ, ಪಕ್ಷಗಳ ಪ್ರಮುಖರನ್ನು ಸೇರಿಸಿಕೊಂಡು ಮಾರಕ ಯೋಜನೆ ವಿರುದ್ಧ ಹೋರಾಟ ನಡೆಸಬೇಕು’ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಕರೆ ನೀಡಿದರು. `ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಪ್ರತ್ಯೇಕ ರಾಜ್ಯ ಬೇಡಿಕೆ ಮುಂದಿಡುವುದು ಅನಿವಾರ್ಯ’ ಎಂದು ಕೆ.ವಿ.ಸುಬ್ಬಣ್ಣ ಎಚ್ಚರಿಸಿದರು. ವಿವಿಧ ಸಂಘಟನೆಗಳ ಪ್ರಮುಖರಾದ ತೀ.ನ.ಶ್ರೀನಿವಾಸ್, ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರ, ಸುರೇಶ್ ನಗರ ಈ ಸಭೆಯಲ್ಲಿದ್ದರು. ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು, ವಿಧಾನ ಪರಿಷತ್’ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ವಿವಿಧ ಸಂಘಟನೆಗಳ ಪ್ರಮುಖರಾದ ಬಿ.ಎ. ಇಂದೂಧರ ಗೌಡ, ರವಿಕುಮಾರ ಗೌಡ, ಕವಿತಾ ಧಾರವಾಡ, ಶಾರದಾ ಧಾರವಾಡ, ಬಿದನೂರು, ಸಮನ್ವಯ ಕಾಶಿ, ಶ್ರೀಪಾದ ಬಿಚ್ಚುಗತ್ತಿ, ಬಿ.ಜಿ.ನಾಗರಾಜ್, ಕೇಶವ ನಾಯ್ಕ ಬಳ್ಕೂರ, ಆರ್.ಎಂ.ಷಣ್ಮುಖ, ಕೆ.ಎಸ್.ಪ್ರಶಾಂತ್ ಸಭೆಯಲ್ಲಿದ್ದು ಅಭಿಪ್ರಾಯ ಹಂಚಿಕೊoಡರು.
ಪ್ರಮುಖರಾದ ಧನುಷ್ ಕುಮಾರ್, ಎಂ.ವಿ.ಪ್ರತಿಭಾ, ಐ.ವಿ.ಹೆಗಡೆ, ಅನಿತಾ ಕುಮಾರಿ, ಚಕ್ರವಾಕ ಸುಬ್ರಮಣ್ಯ, ಜಿ.ಆರ್.ಪಂಡಿತ್. ಎಲ್.ವಿ.ಅಕ್ಷರ, ಪೂರ್ಣಿಮಾ ಬಸವರಾಜ್, ಸೌಮ್ಯ ಗಿರೀಶ್, ಭದ್ರೇಶ್ ಬಾಳಗೋಡು, ಜಿ.ವಿ. ರವೀಂದ್ರ, ಸುಗಂಧರಾಜ್, ಕೇಶವ ನಾಯ್ಕ ಬಳ್ಳೂರು, ಮಂಜುನಾಥ್ ನಾಯ್ಕ ಗೇರುಸೊಪ್ಪ, ವಿನೋದ್ ನಾಯ್ಕ ಮಾವಿನಹೊಳೆ, ಟಿ.ಆರ್.ಕೃಷ್ಣಪ್ಪ, ಯು.ಎಚ್.ರಾಮಪ್ಪ, ವಿನಾಯಕ ಬಿ.ನಾಯ್ಕ ಮೂಡ್ಕಣಿ, ನಾಗರಾಜ ನಾಯ್ಕ ಅಳ್ಳಂಕಿ, ಕೆ.ವಿ.ಪ್ರವೀಣ್, ಸೀಮಾ ಶಿವಮೊಗ್ಗ ಇತರರು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.




