ಕುಮಟಾ: ಸಂತೇಗುಳಿ ಗ್ರಾ ಪಂ ವ್ಯಾಪ್ತಿಯ ಉಳ್ಳೂರುಮಠದಲ್ಲಿ ಮರಾಠಿ ಸಮಾಜದ 9 ಕುಟುಂಬದವರನ್ನು ಬಹಿಷ್ಕರಿಸಿದ ಆರೋಪ ಕೇಳಿ ಬಂದಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.
ವರ್ಷದ ಹಿಂದೆ ಮರಾಠಿ ಸಮಾಜದ ಮುಖಂಡ ಗಣಪತಿ ಮರಾಠಿ ಮತ್ತು ಅದೇ ಊರಿನ ನಾಮಧಾರಿ ಸಮಾಜದ ವ್ಯಕ್ತಿಯ ನಡುವೆ ವೈಯಕ್ತಿಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಗಣಪತಿ ಮರಾಠಿ ನಾಮದಾರಿ ಸಮಾಜದವರಿಗೆ ಬೆಂಬಲ ನೀಡದಂತೆ ಸೂಚಿಸಿದ್ದರು. ಆದರೆ, ಗಜಾನನ ಗಣೇಶ ಮರಾಠಿ, ಹನುಮಂತ ವೆಂಕು ಮರಾಠಿ, ಜಯಂತ ಶ್ರೀಪಾದ ಮರಾಠಿ, ಗಜಾನನ ಹೋಯಾ ಮರಾಠಿ, ವಿನಾಯಕ ಹೋಯಾ ಮರಾಠಿ, ಅರುಣ ಹೋಯಾ ಮರಾಠಿ, ಮಂಜುನಾಥ ಮರಾಠಿ, ಸುರೇಶ ಮರಾಠಿ ಮತ್ತು ಗೀತಾ ಮರಾಠಿ ಅವರ ಕುಟುಂಬದವರು ಆ ಸಮಾಜದ ವ್ಯಕ್ತಿ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ನಂತರವೂ ಇದನ್ನು ಮುಂದುವರೆಸಿದ ಕಾರಣ ಮರಾಠಿ ಸಮಾಜದ ಮುಖಂಡ ಗಣಪತಿ ಮರಾಠಿ ಬಹಿಷ್ಕಾರದ ಕರೆ ನೀಡಿದ್ದಾರೆ ಎಂಬುದು ಸಂತ್ರಸ್ತ ಕುಟುಂಬದವರ ಆರೋಪ.
ಇದೀಗ ಮರಾಠಿ ಸಮಾಜದ ಯಾವುದೇ ಕಾರ್ಯಕ್ರಮಕ್ಕೆ ಇವರಿಗೆ ಆಹ್ವಾನ ಇಲ್ಲ. ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಸಮಾಜದ ಯಾವೊಬ್ಬ ವ್ಯಕ್ತಿಯು ಬರುವುದಿಲ್ಲ. ಸಮಾಜದ ದೇವಸ್ಥಾನಕ್ಕೂ ಹೋಗುವಂತಿಲ್ಲ ಎಂಬ ನಿಯಮಗಳನ್ನು ಹೇರಲಾಗಿದೆ. ಜೊತೆಗೆ ಬೆದರಿಕೆ ಸಹ ಒಡ್ಡಿದ ಬಗ್ಗೆ ನೊಂದವರು ದೂರಿದ್ದಾರೆ. ಕಳೆದ ಮೂರು ತಿಂಗಳಿನಿAದ ಕಷ್ಟ ಅನುಭವಿಸಿದ ಈ 9 ಕುಟುಂಬದವರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಈ ಬಗ್ಗೆ ಪೊಲೀಸರು ಉಳ್ಳೂರುಮಠ ಊರಿನ ಮರಾಠಿ ಸಮಾಜದ ಯಜಮಾನ ಗಣಪತಿ ಮರಾಠಿ ಮತ್ತು ಸಂತೋಷ ಮರಾಠಿ ಅವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಮರಾಠಿ `ನಾವು ಯಾರಿಗೂ ಬಹಿಷ್ಕಾರ ಹಾಕಿಲ್ಲ. ಅವರೆಲ್ಲ ಸುಳ್ಳು ಆಪಾದನೆ ಮಾಡುತ್ತಿದ್ದಾರೆ’ ಎಂದರು. `ಈ ಬಗ್ಗೆ ಜಿಲ್ಲಾ ಕಮೀಟಿ ಜೊತೆ ಚರ್ಚಿಸುವೆ’ ಎಂದು ತಿಳಿಸಿದರು.








