ರಾಷ್ಟ್ರೀಯ ಹೆದ್ದಾರಿ, ಬಂದರು ಹಾಗೂ ರೈಲ್ವೆ ಹಳಿಯನ್ನು ಸಂಪರ್ಕ ಜೋಡಿಸುವ ಉದ್ದೇಶದಿಂದ ಭೂಮಿ ಹುಡುಕುತ್ತಿದ್ದ ಕಂಪನಿಗೆ ಅಂಕೋಲಾದ ರಿಯಲ್ ಎಸ್ಟೇಟ್ ಎಜಂಟರು 8 ಕೋಟಿ ರೂ ಮೋಸ ಮಾಡಿದ್ದಾರೆ.
ಹೆದ್ದಾರಿ, ಬಂದರು ಹಾಗೂ ರೈಲ್ವೆ ಸಂಪರ್ಕ ಜೋಡಿಸುವುದಕ್ಕಾಗಿ ಮುಂಬೈ ಮೂಲದ JSW ಕೇಣಿ ಪೋರ್ಟ ಪ್ರೆ ಲಿ (ಮಸದ್ ಇನಪ್ರಾ ಪ್ರೆ ಲಿ) ಕಂಪನಿಯವರು ಅಂಕೋಲಾದ ಕೇಣಿಯಲ್ಲಿ 35 ಎಕರೆ ಭೂಮಿ ಹುಡುಕುತ್ತಿದ್ದರು. ಕಾರವಾರದ ಹಬ್ಬುವಾಡದಲ್ಲಿ ಶಾಖಾ ಕಚೇರಿ ಹೊಂದಿರುವ ಈ ಕಂಪನಿ ಪ್ರಾಜೆಕ್ಟ ಮ್ಯಾನೇಜರ್ ಬೀಮರಪ್ಪಾ ಕುಂಟಗೇರಿ ಜಾಗ ಹುಡುಕಲು ರಿಯಲ್ ಎಸ್ಟೇಟ್ ಎಜೆಂಟರ ಮೊರೆ ಹೋಗಿದ್ದರು. ಭೂ ವ್ಯವಹಾರ ನಡೆಸುವ ಕೇಣಿರಸ್ತೆ ಹೊನ್ನೆಕೇರಿಯ ಅಜೀತ ಗಣಪತಿ ನಾಯಕ, ಅವರ್ಸಾ ಕೌಲಗದ್ದೆಯ ಗುರುಪ್ರಸಾದ ಸುಧಾಕರ ರೇವಣಕರ ಹಾಗೂ ಬೆಂಗಳೂರಿನ ತಿರುಪತಿ ಸ್ವಾಮಿ ಎಂಬಾತರನ್ನು ಅವರು ಭೇಟಿ ಮಾಡಿ 2022ರ ಅಗಸ್ಟನಲ್ಲಿ ಭೇಟಿ ಮಾಡಿದ ಅವರು ಕಾಮತ್ ಹೋಟೇಲಿನಲ್ಲಿ ಜಮೀನು ಖರೀದಿ ಮಾತುಕತೆ ನಡೆಸಿದ್ದರು.
ಅದಾದ ನಂತರ ಸೆ 13 ಹಾಗೂ 14ರಂದು ಬೆಂಗಳೂರಿನ ವಸಂತನಗರ ಶಾಂಗ್ರಿಲಾ ಹೊಟೇಲ್‌ನಲ್ಲಿ ಕಂಪನಿ ಅಧಿಕಾರಿ ಎಂ ಎಸ್ ಪಾತ್ರುಡು ಜೊತೆ ರಿಯಲ್ ಎಸ್ಟೇಟ್ ನಡೆಸುವ ಅಜೀತ ನಾಯಕ, ಗುರುಪ್ರಸಾದ ಸುಧಾಕರ ರೇವಣಕರ ಹಾಗೂ ತಿರುಪತಿ ಸ್ವಾಮಿ ಮಾತನಾಡಿದ್ದರು. ಆ ವೇಳೆ ಗುರುಪ್ರಸಾದ ರೇವಣಕರ್ ಮೂಲಕ ಜಮೀನು ವ್ಯವಹಾರ ಮಾಡಿಸುವ ಆಶ್ವಾಸನೆ ನೀಡಿದ್ದರು. ಇದರ ಭಾಗವಾಗಿ ಸೆ 29ರಂದು ಮುಂಬೈಯ ಹೊಟೇಲ್ ರೆಗಸೆನ್ಸಿಯಲ್ಲಿ ಈ ಮೂವರು ಕಂಪನಿ ಪ್ರತಿನಿಧಿಗಳನ್ನು ಭೇಟಿ ಮಾಡಿ ಕೇಣಿಯಲ್ಲಿ 35 ಎಕರೆ ಜಮೀನು ಒದಗಿಸಿಕೊಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು.
ಇದಕ್ಕಾಗಿ ಮುಂಗಡ ಹಣ ಎಂದು ತಮ್ಮ ಕೆನರಾ ಬ್ಯಾಂಕ್ ಖಾತೆಗೆ 2.91 ಕೋಟಿ ರೂ ಜಮಾ ಮಾಡಿಸಿಕೊಂಡಿದ್ದರು. ಪ್ರತಿಯಾಗಿ 10 ಎಕರೆ ಜಮೀನನ್ನು ಸಹ ಹಂತ ಹಂತವಾಗಿ ವಕೀಲ ವಿನೋದ ವಿಠ್ಠಲ ಶಾನಭಾಗ ಅವರ ಮೂಲಕ ಕಂಪನಿ ಹೆಸರಿಗೆ ನೊಂದಣಿ ಮಾಡಿಸಿಕೊಟ್ಟಿದ್ದರು. ಅದಾದ ನಂತರ ಉಳಿದ ಭೂಮಿ ಖರೀದಿಗಾಗಿ ಗುರುಪ್ರಸಾದ ರೇವಣಕರ್ ಖಾತೆಗೆ 14.71 ಕೋಟಿ ರೂ ಜಮಾ ಆಗಿದ್ದು, ಉಳಿದ 25 ಎಕರೆ ಭೂಮಿಯನ್ನು ಮಾತಿನ ಪ್ರಕಾರ ಕಂಪನಿಗೆ ಕೊಡಿಸಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ `ಉಳಿದ ಭೂಮಿ ಖರೀದಿ ಅಸಾಧ್ಯ’ ಎಂದು ಮೂವರು ಹೇಳಿಕೊಂಡಿದ್ದರು. ಆಗ ಕಂಪನಿಯವರು `10 ಎಕರೆ ಭೂಮಿಯದು ಹೊರತುಪಡಿಸಿ ಉಳಿದ ಹಣ ಮರಳಿಸಿ’ ಎಂದು ಸೂಚಿಸಿದ್ದರು.
ಆಗ ಗುರುಪ್ರಸಾದ 8 ಕೋಟಿ ರೂ ಮೌಲ್ಯದ ಚೆಕ್ ನೀಡಿದ್ದು, ಅದು ಬೌನ್ಸ ಆಗಿದೆ. ಇದರೊಂದಿಗೆ ಅಜೀತ ನಾಯಕ ಉಳಿದ ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಗುರುಪ್ರಸಾದ ಕಂಪನಿ ಅಧಿಕಾರಿಗಳಿಗೆ ಹೇಳಿದ್ದಾರೆ. 14,71,06,035ರೂ ಪಡೆದು 10 ಎಕರೆ ಜಾಗ ಪಡೆದ ಕಂಪನಿ ತನಗೆ ಒಟ್ಟು 8,02,35,694 ರೂ ಮೋಸವಾದ ಬಗ್ಗೆಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.




