ಶಿರಸಿ: ಶಿಖಾರಿಗೆ ಹೋಗಿದ್ದ ಮೂವರಿಗೆ ಜಿಂಕೆ ಸಿಕ್ಕಿದ್ದು, ಅದರ ಕೊಂದ ಪಾಪಕ್ಕೆ ಗಣಪತಿ ಗೌಡ ಜೈಲು ಸೇರಿದ್ದಾರೆ.
ಉಂಚಳ್ಳಿ ಹೊಳೆ ಬದಿಯ ಕಾಡಿಗೆ ಗಣಪತಿ ಮಂಜುನಾಥ ಗೌಡ ಶಿಖಾರಿಗೆ ಹೋಗಿದ್ದರು. ಅದೇ ಊರಿನ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ ನಾಯ್ಕ ಸಹ ಗಣಪತಿ ಗೌಡರ ಜೊತೆಯಾಗಿದ್ದರು. ಈ ಮೂವರು ಸೇರಿ ಕಾಡು ತಿರುಗುತ್ತಿದ್ದಾಗ ಅಲ್ಲಿ ಜಿಂಕೆ ಕಾಣಿಸಿಕೊಂಡಿದ್ದು, ಗಣಪತಿ ಗೌಡ ಆ ಜಿಂಕೆಯನ್ನು ಕೊಂದರು.
ಈ ವಿಷಯ ಅರಿತ ಶಿರಸಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ ಆರ್ ಸಹಾಯಕ ಸಂರಕ್ಷಣಾಧಿಕಾರಿಗಳ ತಂಡ ಕಟ್ಟಿದರು. ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕರ ನೇತ್ರತ್ವದಲ್ಲಿ ಕಾಡಿನಲ್ಲಿ ಶೋಧ ನಡೆಸಿದರು. ಶಬ್ದ ಬಂದ ಕಡೆ ಹೋದಾಗ ಅಲ್ಲಿ ಈ ಮೂವರು ಜಿಂಕೆ ಮಾಂಸದ ಜೊತೆ ಸಿಕ್ಕಿ ಬಿದ್ದರು.
ಅರಣ್ಯ ಸಿಬ್ಬಂದಿಯನ್ನು ನೋಡಿದ ವೆಂಕಟೇಶ ನಾಯ್ಕ ಹಾಗೂ ಗಣೇಶ ನಾಯ್ಕ ಕಾಡಿನಲ್ಲಿ ಓಟಕ್ಕಿಳಿದರು. ಕಾಡು ದಾರಿಯಲ್ಲಿ ಎಲ್ಲಿ ಹುಡುಕಿದರೂ ಅವರು ಸಿಗಲಿಲ್ಲ. ಗಣಪತಿ ಗೌಡರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಅರಣ್ಯ ಸಿಬ್ಬಂದಿ ಸಹಚರರ ಬಗ್ಗೆ ಮಾಹಿತಿ ಕೇಳಿದರು. ಅವರಿಬ್ಬರ ಹೆಸರು ಹಾಗೂ ವಿಳಾಸ ಪಡೆದು ಊರಿಗೆ ಮರಳಿ, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.




