ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ ಮೇಲೆಯೂ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.
ಕ್ಯಾಸಲರಾಕ್ ದೋಬಿವಾಡದ ಅಬ್ದುಲ್ ರಶೀದ್ ಮೊಬೈಲ್ ಮೂಲಕ ಹಲವರಿಗೆ ಫೋನ್ ಮಾಡಿ `1 ರೂಪಾಯಿಗೆ 80 ರೂ ಕೊಡುವೆ’ ಎಂದು ಆಮೀಷ ಒಡ್ಡುತ್ತಿದ್ದ. `ವಾಟ್ಸಪ್ ಮೂಲಕ ಸಂಖ್ಯೆ ಬರೆದು ಕಳುಹಿಸಿ’ ಎನ್ನುವ ಆತ ಆನ್‌ಲೈನ್ ಮೂಲಕ ಮಟ್ಕಾ ಹಣ ಪಡೆಯುತ್ತಿದ್ದ. ಅನೇಕರು ವಾಟ್ಸಪ್ ಮೂಲಕ ಮಟ್ಕಾ ಸಂಖ್ಯೆ ಬರೆದು ಚೀಟಿ ಕಳುಹಿಸುತ್ತಿದ್ದರು. ನಿತ್ಯ ಈ ರೀತಿ ಮಟ್ಕಾ ಆಡಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಅಬ್ದುಲ್ ರಶೀದ್ ಸಂಜೆ ವೇಳೆ ಮೊಬೈಲಿಗೆ ಬಂದ ಎಲ್ಲಾ ಚೀಟಿಯನ್ನು ಡಿಲಿಟ್ ಮಾಡುತ್ತಿದ್ದ. ಈತನ ಮಟ್ಕಾ ಆಡಿಸುವ ಕೆಲಸಕ್ಕೆ ಅದೇ ಊರಿನ ಇಮ್ತಾಯಿಜ್ ಪಠಾಣಾ ಸಹ ಸೇರಿಕೊಂಡಿದ್ದ.
ನ 13ರಂದು ಸಿಪಿಐ ಚಂದ್ರಶೇಖರ ಹರಿಹರ್ ಈ ವಿಷಯ ಅರಿತು ಅಬ್ದುಲ್ ರಶೀದ್’ನ ಸ್ಯಾಮಸಂಗ್ ಹಾಗೂ ಇಮ್ತಾಯಿಜ್ ಪಠಾಣಾ’ನ ರೆಡ್ಮಿ ಮೊಬೈಲ್ ವಶಕ್ಕೆ ಪಡೆದರು. ವಾಟ್ಸಪ್ ಪರಿಶೀಲಿಸಿದಾಗ ಅಲ್ಲಿ ಮಟ್ಕಾ ಆಟದ ಚೀಟಿಗಳು ಕಾಣಿಸಿದವು. ಗ್ಯಾಲರಿಯಲ್ಲಿ ಸಹ ಅಂಕಿ-ಸoಖ್ಯೆ ಬರೆದ ಚೀಟಿಗಳು ಸಾಕಷ್ಟಿದ್ದವು. ಆ ಎಲ್ಲಾ ದಾಖಲೆಗಳ ಪ್ರಿಂಟ್ ಪಡೆದ ಪೊಲೀಸರು `ಸಂಗ್ರಹವಾದ ಹಣವನ್ನು ಯಾರಿಗೆ ಕೊಡುವೆ?’ ಎಂದು ಅವರಿಬ್ಬರಲ್ಲಿಯೂ ಪ್ರಶ್ನಿಸಿದರು. ಆಗ ದಾಂಡೇಲಿಯ ಮಸ್ತಾಕ್ ಮಿಶ್ರಿಕೋಟೆ ಹೆಸರು ಕೇಳಿ ಬಂದಿದ್ದು, ಆತನ ಮೇಲೆಯೂ ದಾಳಿ ಮಾಡಿದರು.
ಮಸ್ತಾಕ್ ಮಿಶ್ರಿಕೋಟೆ ಜೇಬಿನಲ್ಲಿ ಮಟ್ಕಾ ಆಟದಿಂದ ಸಂಗ್ರಹಿಸಿದ್ದ 1690ರೂ ಸಿಕ್ಕಿದ್ದು, ಈ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.




