ಜೊಯಿಡಾ: ರಾಮನಗರದ ಹನುಮಾನ್ ಲೈಫ್ ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕು ಹಿಡಿದು ಅಲ್ಲಿನ ಶಿಕ್ಷಕರಿಗೆ ಬೆದರಿಸಿದ್ದಾನೆ. ಮುಖ್ಯಾಧ್ಯಾಪಕರ ಜೊತೆ ಎಸ್‌ಡಿಎಂಸಿ ಅಧ್ಯಕ್ಷರಿಗೂ ಚಾಕು ತೋರಿಸಿದ ಆತ ಕೊನೆಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶುಕ್ರವಾರ ಸಂಜೆ ವೇಳೆ ಮೂರು ಚಾಕು ಹಿಡಿದು ಆತ ಶಾಲೆ ಒಳಗೆ ಪ್ರವೇಶಿಸಿದ್ದ. ಶಿಕ್ಷಕರ ಬಳಿ ಆತ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಸಿಗದ ಕಾರಣ ಮುಖ್ಯಾಧ್ಯಾಪಕರ ಬಳಿ ಹೋಗಿದ್ದ. ಈ ವೇಳೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರ ಜೊತೆ ಆತ ಜಗಳವಾಡಿದ್ದು, `ನೀನು ಅಧ್ಯಕ್ಷ ಆದರೆ ನಾನು ಕಾರ್ಯದರ್ಶಿ’ ಎಂದು ಆತ ಚಾಕು ತೋರಿಸಿ ಹೇಳಿದ ದೃಶ್ಯಾವಳಿಗಳು ವೈರಲ್ ಆಗಿದೆ.
ಕೊಂಕಣಿ ಭಾಷೆಯಲ್ಲಿ ಮಾತನಾಡಿದ ಚಾಕು ಹಿಡಿದ ವ್ಯಕ್ತಿ ಶಾಲಾ ಅಧ್ಯಕ್ಷರಿಗೆ ಕೈ ತೋರಿಸಿ ಮಾತನಾಡಿದ್ದಾನೆ. ಈ ವೇಳೆ ಅಧ್ಯಕ್ಷರು ಸಹ ಆತನನ್ನು ಬೆದರಿಸುವ ಪ್ರಯತ್ನ ನಡೆಸಿ, ಅಲ್ಲಿಂದ ಹೋಗಿದ್ದಾರೆ. ಇದಾದ ನಂತರ ಆತ ಚಾಕುದಿಂದ ತಿವಿದುಕೊಂಡು ಆಸ್ಪತ್ರೆ ಸೇರಿರುವ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಗಾಯಗೊಂಡವನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾವ ಕಾರಣಕ್ಕೆ ಈ ಗಲಾಟೆ ನಡೆದಿದೆ? ಎಂಬ ಬಗ್ಗೆ ಅಲ್ಲಿನವರು ಯಾರೂ ಬಾಯ್ಬಿಟ್ಟಿಲ್ಲ. ಈ ಬಗ್ಗೆ ಪೊಲೀಸ್ ದೂರು ಸಹ ನೀಡಿಲ್ಲ.




