ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪ್ರಥ್ವಿರಾಜ ನಾಯ್ಕ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಎಲೆಗಳ ಮೇಲೆ ಚಿತ್ರ ಬಿಡಿಲು ಶುರು ಮಾಡಿದರು. ಸತತ ಪರಿಶ್ರಮ, ನಿರಂತರ ಅಭ್ಯಾಸದ ಪರಿಣಾಮ ಅವರು ಇದೀಗ ಅಶ್ವಥ ಎಲೆಗಳ ಮೇಲೆ ಅಚ್ಚುಕಟ್ಟಾದ ಪ್ರತಿಬಿಂಬ ರಚಿಸುವುದರಲ್ಲಿ ಪರಿಣಿತಿ ಪಡೆದಿದ್ದಾರೆ.
ಕುಮಟಾ ತಾಲೂಕಿನ ಬಸ್ತಿಪೇಟೆಯ ಪ್ರಥ್ವಿರಾಜರಿಗೆ 21 ವರ್ಷ. ಅವರು ಹೊನ್ನಾವರದ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿ. ಚಿಕ್ಕ ವಯಸ್ಸಿನಿಂದಲೂ ಅವರಿಗೆ ಪೆನ್ಸಿಲ್ ಮೇಲೆ ಅಪಾರ ಮೋಹ. ನೂರಾರು ಬಗೆಯ ಪೃಕೃತಿ ಚಿತ್ರಗಳನ್ನು ಅವರು ಪೆನ್ಸಿಲ್ ಮೂಲಕ ಚಿತ್ರಿಸಿದ್ದರು. ತಮ್ಮ ಕೈ ಚಳಕದಿಂದ ಬಿಳಿಹಾಳೆಗಳಿಗೆ ಬಣ್ಣ ಕೊಟ್ಟಿದ್ದರು. ಕ್ರಮೇಣವಾಗಿ ಅವರು ಪೆಪರ್ ಪೆನ್ಸಿಲ್ ಜೊತೆ ಎಲೆಗಳ ಮೇಲೆ ಚಿತ್ರ ಬಿಡಿಸಲು ಶುರು ಮಾಡಿದರು.
ಕೊರೊನಾ ಅವಧಿಯಲ್ಲಿ ಕಲಿತ ವಿದ್ಯೆ
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಪ್ರಥ್ವಿರಾಜರ ಚಿತ್ರಕಲೆಗೆ ಅಪಾರ ಸಮಯ ಸಿಕ್ಕಿತು. ಈ ಅವಧಿಯಲ್ಲಿ ಅವರು ಎಲೆಗಳ ಮೇಲೆ ಸಾಕಷ್ಟು ಪ್ರಯೋಗ ನಡೆಸಿದರು. ಮೊದಲ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿಲ್ಲ. ಕೆಲ ಎಲೆಗಳು ಮುದುರಿಕೊಳ್ಳುತ್ತಿದ್ದವು. ಇನ್ನು ಕೆಲವು ಚಿತ್ರ ಮುಗಿಯುವುದರೊಳಗೆ ಬಾಡುತ್ತಿದ್ದವು. ಚಂದದ ಚಿತ್ರ ಮೂಡಿದರೂ ಎಲೆಗಳು ಹರಿದು ಹೋಗುತ್ತಿದ್ದವು.
ಹೀಗಾಗಿ ಬೇರೆ ಬೇರೆ ಎಲೆಗಳ ಮೇಲೆ ಚಿತ್ರ ಬಿಡಿಸುವುದನ್ನು ಕಡಿಮೆ ಮಾಡಿದ ಅವರು ಅಶ್ವಥ ಎಲೆಯ ಮೇಲೆ ಚಿತ್ರ ಬಿಡಿಸಲು ಶುರು ಮಾಡಿದರು. ಅಶ್ವಥ ಎಲೆಗಿರುವ ಆಂತರಿಕ ಶಕ್ತಿ ಪ್ರಥ್ವಿರಾಜರ ಕಲೆಯನ್ನು ಪ್ರೋತ್ಸಾಹಿಸಿತು. ಗಟ್ಟಿಯಾದ ಎಲೆ, ವಾರ ಕಳೆದರೂ ಬಾಡದಿರುವಿಕೆಗೆ ಅಶ್ವಥ ಎಲೆಗಳ ಮೇಲಿನ ಚಿತ್ರಗಳು ಶಾಶ್ವತವಾಗಿ ಉಳಿದವು. ಕೊನೆಗೆ ತಾವು ಬಿಡಿಸಿದ ಚಿತ್ರಗಳಿಂದ ಚಂದದ ಪ್ರೇಮ್ ಅಳವಡಿಸಿ ಅವರು ಅದನ್ನು ಗಣ್ಯರಿಗೆ ಉಡುಗರೆ ಮಾಡಿದರು.
ಜೂಜಾಟದ ವಿರುದ್ಧ ಜನಜಾಗೃತಿ
ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಸಹ ಪ್ರಥ್ವಿರಾಜ್ ಅವರು ಎಲೆಗಳ ಮೇಲೆ ಬಿಡಿಸಿದ್ದಾರೆ. ಆನ್‌ಲೈನ್ ಆಟಗಳು, ಕಾನೂನುಬಾಹಿರ ಜೂಜಾಟ ತಡೆಗಾಗಿ ಅವರು ಅಶ್ವಥ ಎಲೆಗಳ ಮೇಲಿನ ಚಿತ್ರದಿಂದ ಜನ ಜಾಗೃತಿ ನಡೆಸುತ್ತಿದ್ದಾರೆ. ತಾವು ಬಿಡಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅರಿವು ಮೂಡಿಸುತ್ತಿದ್ದಾರೆ. `ದುಶ್ಚಟಗಳಿಂದ ದೂರವಿರುವ ಬಗ್ಗೆ ಜನಜಾಗೃತಿ ಮೂಡಿಸಲು ಚಿತ್ರಕಲೆಯೂ ಒಂದು ಮಾರ್ಗ’ ಎಂದವರು ಹೇಳುತ್ತಾರೆ. ಪ್ರಥ್ವಿರಾಜ ಅವರು ವಿಭಿನ್ನ ರೀತಿಯಲ್ಲಿ ಜನ ಜಾಗೃತಿಯ ಸಂದೇಶ ಮೂಡಿಸುತ್ತಿರುವ ಬಗ್ಗೆ ಅವರ ಬ್ಯಾಂಕ್ ಉದ್ಯೋಗಿಯಾಗಿರುವ ಪ್ರಥ್ವಿರಾಜ ಅವರ ತಂದೆ ಹರಿಶ್ಚಂದ್ರ ಹಾಗೂ ಜಿಎಸ್‌ಟಿ ಕಚೇರಿ ಕರ್ತವ್ಯದಲ್ಲಿರುವ ತಾಯಿ ಜಯಶ್ರೀ ಸಂತಸ ವ್ಯಕ್ತಪಡಿಸಿದರು.
ಇದೀಗ ಬಿಡುವಿಲ್ಲದ ಕೆಲಸ!
ಚಿತ್ರ ಬಿಡಿಸುವ ಹವ್ಯಾಸ ಪ್ರಥ್ವಿರಾಜ ಅವರಿಗೆ ಅರೆಕಾಲಿಕ ಉದ್ಯೋಗವನ್ನು ನೀಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ನೂರಾರು ಬಗೆಯ ಚಿತ್ರಗಳನ್ನು ಎಲೆಗಳ ಮೇಲೆ ಬಿಡಿಸಿದ್ದಾರೆ. ಪ್ರತಿಯೊಂದು ಚಿತ್ರ ರಚನೆಗೂ ಅವರು ಸುಮಾರು ಎರಡು ತಾಸು ಸಮಯ ವ್ಯಯಿಸುತ್ತಾರೆ. ಅತ್ಯಂತ ಏಕಾಗೃತೆಯಿಂದ ಎಲೆಗಳ ಮೇಲೆ ತಮ್ಮ ಪ್ರತಿಭೆ ಮೂಡಿಸುತ್ತಾರೆ.
`ಅಶ್ವಥ ಎಲೆಗಳಲ್ಲಿ ಮೂಡಿದ ಚಿತ್ರಗಳಿಗೆ ಪ್ರೇಮ್ ಹಾಕಿಡುವುದರಿಂದ ಎಲೆ ಒಣಗಿದರೂ ಚಿತ್ರ ಬಾಡುವುದಿಲ್ಲ. ಅಂದದ ಪ್ರೇಮಿನೊಳಗೆ ಒಣಗಿದ ಎಲೆ ಬಣ್ಣದಲ್ಲಿ ಕಾಣವ ಚಿತ್ರಗಳು ಇನ್ನಷ್ಟು ಆಕರ್ಷಕ. ಇದನ್ನು ಅರಿತ ಅನೇಕರು ಅವರಿಗೆ ಫೋನ್ ಮಾಡಿ ತಮ್ಮದೂ ಒಂದು ಚಿತ್ರ ಬಿಡಿಸುವಂತೆ ಕೇಳಿಕೊಳ್ಳುತ್ತಾರೆ. ಅದಕ್ಕೆ ತಕ್ಕ ಸಂಭಾವನೆಯನ್ನು ನೀಡುವುದರಿಂದ ಶೈಕ್ಷಣಿಕ ಸಾಧನೆಗೂ ಅನುಕೂಲವಾಗಿದೆ’ ಎಂದು ಅಂಚೆ ಇಲಾಖೆ ಉದ್ಯೋಗಿಯಾಗಿರುವ ಪ್ರಥ್ವಿರಾಜ ಅವರ ತಮ್ಮ ಶ್ರೀರಾಮ ನಾಯ್ಕ ಅನಿಸಿಕೆ ಹಂಚಿಕೊoಡರು.
ಅಶ್ವಥ ಎಲೆಗಳ ಮೇಲೆ ನಿಮ್ಮ ಪ್ರೀತಿಪಾತ್ರದವರ ಚಿತ್ರ ಬಿಡಿಸಲು ಇಲ್ಲಿ ಫೋನ್ ಮಾಡಿ: 9353297415