ಹೊನ್ನಾವರ: ಮೂಡ್ಕಣಿ ಬಳಿಯ ನಾರಾಯಣ ನಾಯ್ಕ ಅವರು ಶುಕ್ರವಾರ ಅಡಿಕೆ ಮಾರಾಟ ಮಾಡಿದ್ದು, ಫಸಲು ಮಾರಾಟದ ಹಣ ಅವರಿಗೆ ದಕ್ಕಿಲ್ಲ. ಜೇಬಿಗೆ ಬ್ಲೇಡು ಹಾಕಿದ ಕಳ್ಳರು 90 ಸಾವಿರ ರೂ ಎಗರಿಸಿದ್ದಾರೆ. ಬ್ಲೇಡಿಗೆ ಸಿಲುಕಿದ ನೋಟುಗಳು ಅರ್ದ ತುಂಡಾಗಿ ಅಲ್ಲಲ್ಲಿ ಬಿದ್ದಿವೆ.
ಮೂಡ್ಕಣಿ ಬಳಿಯ ಕೆರವಳ್ಳಿಯ ನಾರಾಯಣ ನಾಯ್ಕ ಅವರು ಕುಮಟಾ ಮಾರುಕಟ್ಟೆಗೆ 6 ಕ್ವಿಂಟಲ್ ಅಡಿಕೆ ತಂದಿದ್ದರು. ಖಾಸಗಿ ವ್ಯಾಪಾರಿ ಬಳಿ ಅದನ್ನು ಮಾರಾಟ ಮಾಡಿ 1.90 ಲಕ್ಷ ರೂ ಪಡೆದಿದ್ದರು. ತಾವು ಧರಿಸಿದ್ದ ಬರ್ಮೋಡಾ ಚಡ್ಡಿಯ ಒಂದು ಕಿಸೆಯಲ್ಲಿ 1 ಲಕ್ಷ ರೂ ಹಾಗೂ ಇನ್ನೊಂದು ಜೇಬಿನಲ್ಲಿ 90 ಸಾವಿರ ರೂ ಹಣವನ್ನು ಇರಿಸಿಕೊಂಡಿದ್ದರು. ಅದರ ಮೇಲೆ ಲುಂಗಿ ಸುತ್ತಿಕೊಂಡು ಖುಷಿಯಿಂದ ಮನೆ ಕಡೆ ಹೊರಟಿದ್ದರು.
ಕುಮಟಾದಿಂದ ಹೊನ್ನಾವರ ಬಸ್ಸು ಹತ್ತಿ ಅವರು ಹೊರಟಿದ್ದು, ಹೊನ್ನಾವರದಲ್ಲಿ ಬಸ್ ಇಳಿದಾಗ ಕಸೆ ತೂತಾಗಿರುವುದು ಗೊತ್ತಾಯಿತು. ಬಸ್ಸಿನ ಒಳಭಾಗ 200ರೂ ಮೌಲ್ಯದ ಹಲವು ನೋಟುಗಳು ಅರ್ದ ತುಂಡಾಗಿ ಬಿದ್ದಿದ್ದವು. ನಾರಾಯಣ ನಾಯ್ಕರ ಅರಿವಿಗೆ ಬಾರದಂತೆ ಅವರ ಜೇಬಿಗೆ ಬ್ಲೇಡು ತಾಗಿಸಿದ ಕಳ್ಳರು ಅಲ್ಲಿದ್ದ 90 ಸಾವಿರ ರೂ ಹಣವನ್ನು ಎಗರಿಸಿದ್ದರು.
ಹಣ ಕಳೆದುಕೊಂಡ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು, ಕೊನೆಗೆ ಪೊಲೀಸ್ ದೂರು ನೀಡಿದರು.




