ಅಂಕೋಲಾ: ಹಿಲ್ಲೂರಿನ ಬಳಿಯಿರುವ ಹುಲ್ಲುಗಾವಲು ಪ್ರದೇಶದಲ್ಲಿ ಅವಿತಿದ್ದ ಕಾಳಿಂಗ ಸರ್ಪ ಅಲ್ಲಿ ಓಡಾಡುವ ಜನರ ಆತಂಕಕ್ಕೆ ಕಾರಣವಾಗಿದ್ದು, ಸೋಮವಾರ ಹರಸಾಹಸದಿಂದ 14 ಅಡಿ ಉದ್ದದ ಹಾವನ್ನು ಬಂಧಿಸಲಾಯಿತು. ಅರಣ್ಯ ಸಿಬ್ಬಂದಿ ದಟ್ಟ ಕಾಡಿಗೆ ಕರೆದೊಯ್ದು ಆ ಹಾವನ್ನು ಬಿಡುಗಡೆ ಮಾಡಿದರು.
ತಿಂಗಳಬೈಲ್ ಗ್ರಾಮದ ತೋಟದಲ್ಲಿ ಸೊಂಪಾಗಿ ಹುಲ್ಲು ಬೆಳೆದಿತ್ತು. ಅಲ್ಲಿ ಕಾಳಿಂಗ ಸರ್ಪ ಅಡಗಿತ್ತು. ಹಾವು ನೋಡಿದ ಆಳು ಬೆಚ್ಚಿ ಬಿದ್ದು, ತೋಟದ ಮಾಲಕರಿಗೆ ವಿಷಯ ಮುಟ್ಟಿಸಿದರು. ತೋಟದ ಮಾಲಕರು ಅರಣ್ಯ ಇಲಾಖೆಗೆ ಸುದ್ದಿ ಹೇಳಿದರು. ಅರಣ್ಯ ಇಲಾಖೆಯವರು ಅವರ್ಸಾದ ಮಹೇಶ ನಾಯ್ಕರಿಗೆ ಫೋನು ಮಾಡಿದರು.
ತಮ್ಮ ಮಗ ಗಗನ್ ಜೊತೆ ಅಲ್ಲಿಗೆ ಬಂದ ಮಹೇಶ ನಾಯ್ಕ ಮುಕ್ಕಾಲು ಗಂಟೆ ಗುದ್ದಾಟ ನಡೆಸಿದರು. ಅರಣ್ಯ ಸಿಬ್ಬಂದಿ ಹಿಡಿದ ಚೀಲದೊಳಗೆ ಹಾವನ್ನು ಬಂಧಿಸಿದರು. ಕೊನೆಗೆ ಅರಣ್ಯ ಸಿಬ್ಬಂದಿ ಅದನ್ನು ಕಾಡಿಗೆ ಬಿಟ್ಟರು.




