ಶಿರಸಿ: ಹಸಿದ ಹೊಟ್ಟೆಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಯಾಗಿ ಏಳು ವರ್ಷದ ನಂತರ ಶಿರಸಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಊಟ ವಿತರಣೆಗೆ ತರಲಾಗಿದ್ದ ಬಟ್ಟಲು-ತಟ್ಟೆಗೆ ತುಕ್ಕು ಹಿಡಿಯುವ ದಿನ ಸಮೀಪಿಸಿದರೂ ಕ್ಯಾಂಟೀನ್ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಏಳು ವರ್ಷದ ಹಿಂದೆಯೇ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದೆ. ಶಿರಸಿಯಲ್ಲಿ ಸಹ ಅದೇ ವೇಳೆ ಕ್ಯಾಂಟಿನ್ ಮಂಜೂರಿ ಆಗಿದ್ದರೂ, ಜಾಗದ ಗೊಂದಲದಿAದಾಗಿ ಕೆಲಸ ಶುರುವಾಗಲಿರಲಿಲ್ಲ. ಇದೀಗ ರಾಯಪ್ಪ ಶಾಲೆ ಎದುರು ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಮುಕ್ತಾಯದ ಹಂತದಲ್ಲಿದ್ದು, ಒಳಾಂಗಣ ಕೆಲಸ ಹಾಗೂ ಕಂಪೌAಡ್ ನಿರ್ಮಾಣ ಮಾತ್ರ ಬಾಕಿಯಿದೆ. ಆದರೆ, ಆ ವೇಳೆ ತರಲಾಗಿದ್ದ ಅಡುಗೆ ಸಾಮಗ್ರಿ, ಊಟದ ಬಟ್ಟಲು-ಲೋಟಗಳು ಬಳಕೆಯಲ್ಲಿಲ್ಲದೇ ಹಾಳಾಗಿವೆ.
ಬಹುತೇಕ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್’ನಲ್ಲಿ ಕಡಿಮೆ ದರದಲ್ಲಿ ಉತ್ತಮ ಊಟ-ಉಪಹಾರ ವಿತರಿಸಲಾಗುತ್ತಿದೆ. ಆದರೆ, ಶಿರಸಿ ಜನರಿಗೆ ಈ ಭಾಗ್ಯವಿಲ್ಲ. ಯೋಜನೆ ಘೋಷಿಸಿದಾಗ ತರಾತುರಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಿದ್ಧತೆ ನಡೆದರೂ ಆರಂಬದ ಉಮೇದಿ ಕೊನೆವರೆಗೂ ಇರಲಿಲ್ಲ. ಹೀಗಾಗಿ ಆ ವೇಳೆ ನಗರಸಭೆ ಖರೀದಿಸಿದ ಬಟ್ಟಲು-ಪಾತ್ರೆಗಳು ಇದೀಗ ಮೂಲೆ ಗುಂಪಾಗಿವೆ. ನಗರಸಭೆ ಹಿಂದಿನ ಹಳೆಯ ಕಟ್ಟಡದಲ್ಲಿ ಇಂದಿರಾ ಕ್ಯಾಂಟೀನ್’ಗಾಗಿ ಖರೀದಿಸಿದ ಪಾತ್ರೆಗಳನ್ನು ಇರಿಸಲಾಗಿದ್ದು, ಅದನ್ನು ಸ್ವಚ್ಛಗೊಳಿಸಿದವರಿಲ್ಲ.