ಶಿರಸಿ: ಅರಣ್ಯ ಅಧಿಕಾರಿಗಳ ಕಚೇರಿಯಿಂದ ಬಡ ಅತಿಕ್ರಮಣದಾರರಿಗೆ ಒಂದಿಲ್ಲೊ0ದು ನೋಟಿಸ್ ಬರುತ್ತಿದೆ. `ಮೂರು ತಲೆಮಾರಿನ ದಾಖಲೆ ಒದಗಿಸಿ’ `ದಂಡದ ಪ್ರತಿ ಹಾಜರುಪಡಿಸಿ’ ಎಂಬುದನ್ನು ಸೇರಿ ಹಲವು ಬಗೆಯ ನೋಟಿಸ್’ಗಳು ಜನರ ನಿದ್ದೆಕೆಡಿಸಿವೆ.
ಕೆಲ ನೋಟಿಸುಗಳು ಸ್ಥಳೀಯ ಗ್ರಾಮ ಪಂಚಾಯತದ ಮೂಲಕ ಅರಣ್ಯ ಅತಿಕ್ರಮಣದಾರರಿಗೆ ಜಾರಿಯಾಗುತ್ತಿದೆ. ಇನ್ನೂ ಕೆಲವು ಅರಣ್ಯ ಕಚೇರಿಗಳಿಂದ ಬರುತ್ತಿವೆ. ಅರಣ್ಯ ಹಕ್ಕು ಕಾಯಿದೆಯ ವಿವಿಧ ಸಮಿತಿಗಳಿಂದ ಅರ್ಜಿ ಪರಿಶೀಲನಾ ಕಾರ್ಯ ಶುರುವಾಗಿದ್ದು, ಕಾನೂನಿನಲ್ಲಿ ಉಲ್ಲೇಖವಿಲ್ಲದ ದಾಖಲೆಗಳನ್ನು ಕೇಳುತ್ತಿರುವುದು ಜನರಿಗೆ ಸಮಸ್ಯೆಯಾಗಿದೆ.
`1930ರಲ್ಲಿ ಅರಣ್ಯಗಳಲ್ಲಿ ವಾಸಿಸುತ್ತಿರುವ ಮತ್ತು ಕಬ್ಜ ಹೊಂದಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಸೊಂದಾ ಬಳಿಯ ಮೊಗೆದ್ದೆ ಅನ್ನಪೂರ್ಣ ಮರಾಠಿ ಅವರಿಗೆ ನೋಟಿಸ್ ಬಂದಿದೆ. ಈಗಾಗಲೇ ಹಲವು ದಾಖಲೆಗಳನ್ನು ಅವರು ಸಲ್ಲಿಸಿದ್ದರೂ ಮತ್ತೆ ಅದೆಲ್ಲವನ್ನು ಜರಾಕ್ಸ್ ಮಾಡಿ ಕೊಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇನ್ನೋಂದೆಡೆ, ಮಂಜೂರಿ ಅಥವಾ ಅರಣ್ಯ ಭೂಮಿ ಹಕ್ಕನ್ನು ಪಡೆದುಕೊಂಡಿರುವ ಕುರಿತು ಅರಣ್ಯವಾಸಿಗಳಿಂದ ಆಪೇಕ್ಷಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಿಂದ ಒಕ್ಕಲೇಬ್ಬಿಸಿರುವ ಕುರಿತು ನೋಟಿಸ್ ಜಾರಿಯಾಗಿದೆ.
`ನೋಟಿಸ್’ನಲ್ಲಿ ಸೂಚಿಸಿರುವ ದಾಖಲೆಗಳ ಅಲೆದಾಟಕ್ಕಾಗಿ ಅರಣ್ಯ ಅತಿಕ್ರಮಣದಾರರು ಒದ್ದಾಡುತ್ತಿದ್ದಾರೆ. ಪದೇ ಪದೇ ವಿವಿಧ ರೀತಿಯ ಕಾನೂನು ತೊಡಕುಗಳಿಂದ ಸಮಸ್ಯೆ ಉಂಟುಮಾಡುವ ಪ್ರಸಂಗ ಎದುರಾಗುತ್ತಿರುವುದರಿಂದ ಅರಣ್ಯವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹೋರಾಟ ನಡೆಸಲು ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ.