ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ ಮಹೇಶ ರಾಯಗೌಡರ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಅವರು ಏರ್‌ಪೋರ್ಸನಲ್ಲಿ ಸಿವಿಲಿಯನ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಬೆಳಗಾವಿ ಮೂಲದ ಮಹೇಶ ರಾಯಗೌಡರ್ ತಮ್ಮ ಸ್ನೇಹಿತ ಮಂಜುನಾಥ ಹೊಸಮನಿ ಅವರ ಜೊತೆ ಜನವರಿ 19ರಂದು ಉಳುವಿಗೆ ಬಂದಿದ್ದರು. ಆ ದಿನ ಚನ್ನ ಬಸವೇಶ್ವರ ದೇವಾಲಯ ದರ್ಶನ ಮುಗಿಸಿ ಅಲ್ಲಿಯೇ ತಂಗಿದ್ದರು. ಜನವರಿ 20ರಂದು ಅಂಬೋಲಿ-ಉಳುವಿ ನಡುವಿನ ಕಾನೇರಿ ಸೇತುವೆ ಕೆಳಗಿನ ಹಳ್ಳಕ್ಕೆ ತೆರಳಿದ್ದರು.
ಆ ವೇಳೆ ಮಂಜುನಾಥ ಹೊಸಮನಿ ಈಜು ಬಾರದ ಕಾರಣ ದಡದಲ್ಲಿ ಕೂತಿದ್ದರು. ಮಹೇಶ ರಾಯಗೌಡರ್ ಹಳ್ಳಕ್ಕೆ ಇಳಿದು ಈಜುವ ಪ್ರಯತ್ನ ನಡೆಸಿದ್ದರು. ಹಳ್ಳದ ಮದ್ಯಭಾಗಕ್ಕೆ ತೆರಳಿದಾಗ ಈಜಲು ಆಗದೇ ಮಹೇಶ ರಾಯಗೌಡರ್ ನೀರಿನಲ್ಲಿ ಮುಳುಗಿದರು. `ಕಾಪಾಡು’ ಎಂದು ಅವರು ಕೂಗಿದರೂ ಮಂಜುನಾಥ ಹೊಸಮನಿ ಅವರಿಂದ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸ್ನೇಹಿತನ ಕಣ್ಣ ಮುಂದೆಯೇ ಮಹೇಶ ರಾಯಗೌಡರ್ ನೀರಿನಲ್ಲಿ ಮುಳುಗಿ ಸಾವನಪ್ಪಿದರು. ಈ ಬಗ್ಗೆ ಮಂಜುನಾಥ ಹೊಸಮನಿ ಮಹೇಶ ಅವರ ತಂದೆ ಸುಭಾಷ ರಾಯಗೌಡರ್ ಅವರಿಗೆ ವಿಷಯ ಮುಟ್ಟಿಸಿದರು. ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕುಟುಂಬದವರು ಶವ ಪಡೆದರು.




