ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ 21 ಇಲಾಖೆಗಳು ಕೆಲಸ ಮಾಡುತ್ತಿವೆ. ಅದಾಗಿಯೂ ರಾಜ್ಯದಲ್ಲಿ ಮಕ್ಕಳ ಅಸಹಜ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳು ಅಸಹಜ ರೀತಿಯಲ್ಲಿ ಸಾವನಪ್ಪಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ ಟಿ ಇದನ್ನು ದೃಢೀಕರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು `ಮಕ್ಕಳ ಅಸಹಜ ಸಾವು ತಡೆಯುವುದರ ಜೊತೆ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿವಹಿಸಬೇಕು’ ಎಂದು ತಿಪ್ಪೇಸ್ವಾಮಿ ಕೆ ಟಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ 18 ವರ್ಷದೊಳಗಿನ ಸುಮಾರು 5 ಸಾವಿರದಷ್ಟು ಮಕ್ಕಳು ಅಸಹಜ ಸಾವಿಗೀಡಾಗಿದ್ದಾರೆ. ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಅನೇಕ ಇಲಾಖೆಗಳು ಮತ್ತು ಸಮಿತಿಗಳಿದ್ದರೂ ರಾಜ್ಯ ಆಯೋಗಕ್ಕೆ ಹೆಚ್ಚಿನ ದೂರು ಬಂದಿದೆ’ ಎಂದವರು ಹೇಳಿದ್ದಾರೆ.
`ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆ ಸುರಕ್ಷತೆಯನ್ನು ಒದಗಿಸಬೇಕು. ಪೋಷಕರಲ್ಲಿನ ಭಯದ ವಾತಾವರಣ ದೂರ ಮಾಡಿ ವಿಶ್ವಾಸ ಮೂಡಿಸಬೇಕು. ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು, ಶಾಲಾ ಆವರಣದಲ್ಲಿ ಸೂಕ್ತ ರಕ್ಷಣೆಯಿಲ್ಲದೇ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಅಧಿಕಾರಿಗಳ ಜವಾಬ್ದಾರಿ’ ಎಂದವರು ಹೇಳಿದ್ದಾರೆ.
`ರಾಜ್ಯದಲ್ಲಿ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್ ಸಲ್ಲಿಸಿದ ನಂತರ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಅಸುರಕ್ಷತೆಯ ವಾತಾವರಣ ಮತ್ತು ಅನಾಹುತ ಪ್ರಕರಣಗಳು ಸಂಭವಿಸಿದ್ದಲ್ಲಿ ಕುರಿತಂತೆ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಸಂಬoದಪಟ್ಟ ಶಾಲೆಯ ಶಿಕ್ಷಕರಿಂದ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳವರೆಗೆ ಪ್ರತಿಯೊಬ್ಬರನ್ನೂ ಹೊಣೆಗಾರರನ್ನಾಗಿ ಮಾಡಲು ತೀರ್ಮಾನಿಸಲಾಗಿದೆ’ ಎಂದು ಎಚ್ಚರಿಸಿದರು.
ಖಾಸಗಿ ಶಾಲೆಗಳ ವಿರುದ್ಧ ದೂರು!
`ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ. ವರ್ಗಾವಣೆ ಮತ್ರ ನೀಡಲು ಸತಾಯಿಸುತ್ತಿರುವ ಬಗ್ಗೆ ಆಯೋಗಕ್ಕೆ 250 ಪ್ರಕರಣಗಳ ದೂರು ಬಂದಿದೆ’ ಎಂದವರು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ ಎಂ ಮಾತನಾಡಿ `ಶಾಲೆಗಳಲ್ಲಿ ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಮಾನಸಿಕವಾಗಿ ಸಧೃಡರನ್ನಾಗಿ ಮಾಡಬೇಕು. ಮಕ್ಕಳು ಮನೆಗಿಂತಲೂ ಹೆಚ್ಚಿನ ಸಮಯ ಶಾಲೆಗಳಲ್ಲಿ ಕಳೆಯಲಿದ್ದು, ಅವರು ಶಾಲೆಯಲ್ಲಿ ಶಿಕ್ಷಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ಮಣವಾಗಬೇಕು’ ಎಂದರು.





