ಶಂಬುಮನೆಯ ಚಿದಾನಂದ ಹೆಗಡೆ ಅವರಿಗೆ ಬಾಲ್ಯದಿಂದಲೂ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಬಗೆ ಬಗೆಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅವರ ಮನೆ ಆವರಣವೂ ಇದೀಗ ಅಪರೂಪದ ಮ್ಯೂಜಿಯಂ ರೀತಿ ಕಾಣುತ್ತಿದೆ.
ಕುಮಟಾ ತಾಲೂಕಿನ ಕಲ್ಲಬ್ಬೆ ಬಳಿ ಶಂಬುಮನೆ ಚಿದಾನಂದ ಹೆಗಡೆ ಎಂದರೆ ಎಲ್ಲರಿಗೂ ಚಿರಪರಿಚಿತ. ಪೂರ್ವಜರು ಬಳಸುತ್ತಿದ್ದ ಕೃಷಿ ಹಾಗೂ ಇತರ ದಿನಬಳಕೆ ಸಲಕರಣೆಗಳನ್ನು ಸಂಗ್ರಹಿಸುವ ಹವ್ಯಾಸದಿಂದಲೇ ಅವರು ಊರಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಹಳೆಯದನ್ನು ಸಂರಕ್ಷಿಸಿಡುವ ಅವರ ತಲೆ ಜಾನಪದ ವಿಶ್ವ ವಿದ್ಯಾಲಯದ ರೀತಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ ವಸ್ತುವಿನ ಹಿನ್ನಲೆ, ಅದರ ಬಳಕೆ ಹಾಗೂ ಉಪಯೋಗದ ಬಗ್ಗೆ ಎಲ್ಲರಿಗೂ ಸವಿವರವಾಗಿ ಅವರು ಮಾಹಿತಿ ನೀಡುತ್ತಾರೆ.
ಶತಮಾನಕ್ಕಿಂತ ಹಳೆಯದಾದ ಟೈಪ್ ರೈಟರ್, ಕೈ ಪಿಯಾನೋ, ಉಂಗುರ, ವಾಚು, ಕೈಪಟ್ಟಿ ಸೇರಿ ನೂರಾರು ಬಗೆಯ ಕಲಾತ್ಮಕ ಸಾಮಗ್ರಿಗಳು ನೋಡುಗರ ಕುತೂಹಲ ಹೆಚ್ಚಿಸುತ್ತವೆ. ನೇಗಿಲು, ಪಟ್ಟ ಹೊಡೆಯುವ ಸಲಕರಣೆ, ಜಲಮಟ್ಟ, ಬೆತ್ತದ ಪಟ್ಟಿಗೆ, ಮೆಣಸು ಕೊಯ್ದೆ ಚೊಟ್ಟೆ, ಅಕ್ಕಿ ಮೂಡೆಯ ಕುತ್ತಿಗೆ, ಕೂಗಲ ಬಳ್ಳೆಯಿಂದ ನೇಯ್ದ ಪೆಟ್ಟಿಗೆ, ದಡೆಮುಟ್ಟಿ ವೈವಿಧ್ಯಮಯ ಒನಕೆಗಳು, ಹಳೆಯ ಕಾದಲ್ಲಿ ಬಳಸುತ್ತಿದ್ದ ಶ್ಯಾವಿಗೆ, ಚಕ್ಕಲಿ ಮಟ್ಟುಗಳು, ತೊಟ್ಟಿಲು, ಬಾವಿ ಗಡೆಗಡೆ, ಗಿಳಿಗುಟ್ಟಿ, ಕಲ್ಲಿ, ಕಡಗೋಲು, ಗದೆ, ಸಂದುಕಗಳು, ಕೈಹುತ್ತ, ಕರಿಮಣೆ ಕಡಗ, ತೋಳ ಕಡಗ, ಗುಗ್ಗೆ ಕಟ್ಟಿ, ಕಾಡಿಗೆ ಬುರುಡೆ ಹೀಗೆ ಅವರ ಬಳಿಯಿರುವ ಸಂಗ್ರಹಗಳ ಪಟ್ಟಿಯನ್ನು ಬರೆದು ಮುಗಿಸುವ ಹಾಗಿಲ್ಲ!
ಪ್ರೌಢಶಾಲೆಗೆ ಹೋಗುವಾಗ ಚಿದಾನಂದ ಹೆಗಡೆ ನಾಣ್ಯ ಸಂಗ್ರಹದ ಹವ್ಯಾಸ ಬೆಳೆಸಿಕೊಂಡಿರು. ಕ್ರಮೇಣ ಅವರ ಆಸಕ್ತಿ ವಿವಿಧ ವಿದೇಶಿ ನೋಟುಗಳ ಕಡೆ ತಿರುಗಿತು. ಹೀಗಾಗಿ ಬೇರೆ ಬೇರೆ ದೇಶದ ನಾಣ್ಯ-ನೋಟುಗಳನ್ನು ಸಂಗ್ರಹಿಸಿದರು. ಪ್ರಸ್ತುತ 175ಕ್ಕೂ ಅಧಿಕ ದೇಶಗಳ ಖಜಾನೆ ಮಾಹಿತಿ ಅವರಲ್ಲಿದೆ. 60ಕ್ಕೂ ಹೆಚ್ಚು ದೇಶಗಳ ಅಂಚೆ ಚೀಟಿಯನ್ನು ಅವರು ಸಂಗ್ರಹಿಸಿದ್ದಾರೆ. ಅವರ ಈ ವಿಶೇಷ ಸಾಧನೆ ಗುರುತಿಸಿ ರಾಜ್ಯಮಟ್ಟದ ಸನ್ಮಾನಗಳು ಅರೆಸಿ ಬಂದಿವೆ. ಇದೇ ಉತ್ಸಾಹದಲ್ಲಿ ಚಿದಾನಂದ ಹೆಗಡೆ ಅವರು ತಮ್ಮಲ್ಲಿರುವ ಹಳೆಯ ಸಾಮಗ್ರಿಗಳನ್ನು ಬೇರೆ ಬೇರೆ ಕಡೆ ಕೊಂಡೊಯ್ದು ಪ್ರದರ್ಶನವನ್ನು ನೀಡುತ್ತಿದ್ದಾರೆ.
ಚಿದಾನಂದ ಹೆಗಡೆ ಅವರು ಉತ್ತಮ ಕೃಷಿಕರು ಹೌದು. ಅವರು ಓದಿದ್ದು ಸ್ನಾತಕೋತರ ಪದವಿಯಾದರೂ ಪೂರ್ವಜರಿಂದ ಬಂದ 20 ಗುಂಟೆ ತೋಟದಲ್ಲಿ ವಿಭಿನ್ನ ಮಾದರಿಯ ಕೃಷಿ ಮಾಡಿದ್ದರೆ. ಅವರ ತೋಟದಲ್ಲಿ ಬೆಳೆದ ಒಂದು ಅಡಕೆ 18 ಗ್ರಾಂ ತೂಕದೊಂದಿಗೆ ದಾಖಲೆ ಪಟ್ಟಿ ಸೇರಿದೆ. ತೋಟಗಾರಿಕಾ ಇಲಾಖೆಯವರು ಸಹ ಅವರ ಮನೆಗೆ ದೌಡಾಯಿಸಿ ಅಧ್ಯಯನ ನಡೆಸುತ್ತಾರೆ. ಸರ್ಕಾರದಿಂದ ಅವರ ಬಳಿಯಿರುವ ಕೃಷಿ ಹಾಗೂ ಪಾರಂಪರಿಕ ಜಾನಪದ ಸಾಮಗ್ರಿಗಳ ದಾಖಲೀಕರಣ ಕಾರ್ಯವೂ ನಡೆದಿದೆ.