ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ರಾಮನಗುಳಿ ಬಳಿ ಅನುಮಾನಾಸ್ಪದ ಕಾರು ನಿಂತಿದ್ದು, ಮಂಗಳವಾರ ರಾತ್ರಿ ಪೊಲೀಸರು ಆ ಕಾರನ್ನು ತಪಾಸಣೆಗೆ ಒಳಪಡಿಸಿದರು. ಆಗ ಕಾರಿನ ಒಳಗೆ 1.14 ಕೋಟಿ ರೂ ಹಣ ಸಿಕ್ಕಿದೆ!
ಹೆದ್ದಾರಿ ಪಕ್ಕದ ಕಾಡಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಕಾರು ನಿಂತಿತ್ತು. ಆದರೆ, ಆ ಕಾರಿನ ವಾರಸುದಾರರು ಯಾರು? ಎಂಬ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾರಿನ ಒಳಗೆ ಪರಿಶೀಲಿಸಿದಾಗ ಅದರಲ್ಲಿ 11499500ರೂ ಹಣ ಪತ್ತೆಯಾಗಿದೆ. ಕಾರಿನ ನೋಂದಣಿ ಸಂಖ್ಯೆ ಸಹ ನಕಲಿಯಾಗಿದ್ದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.
ಕಾರಿನ ಕಿಟಕಿ ಗಾಜುಗಳು ಒಡೆದಿದ್ದವು. ಚಾಲಕನ ಸೀಟಿನ ಅಡಿಗೆ ಇದ್ದ ಪೆಟ್ಟಿಗೆಯಲ್ಲಿ ಹಣ ತುಂಬಿಕೊoಡಿತ್ತು. ಕಾರು ಹಾಗೂ ಆ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹವಾಲಾ ದಂಧೆಯಲ್ಲಿ ತೊಡಗಿರುವವರು ಹೊಂದಿದ ಹಣ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಆ ಕಾರನ್ನು ಇರಿಸಲಾಗಿದ್ದು, ತನಿಖೆ ನಡೆಯುತ್ತಿದೆ.